

ಪುಣೆ: ಕೋವಿಶೀಲ್ಡ್ ಲಸಿಕೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಲ್ಲಿ ಒಂದೇ ದಿನದಲ್ಲಿ ಎರಡೆರೆಡು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಉರಿದಿದ್ದ ಕಟ್ಟಡದ ಮತ್ತೊಂದು ಕಂಪಾರ್ಟ್ಮೆಂಟ್ನಲ್ಲಿ ಸಂಜೆ ಬೆಂಕಿ ಹೊತ್ತಿ ಉರಿದಿದೆ. ಈಗಾಗಲೇ ಅವಘಡದಲ್ಲಿ ಐವರು ಸಾವನ್ನಪ್ಪಿದ್ದು, ನಾಲ್ವರನ್ನು ರಕ್ಷಿಸಿರುವುದಾಗಿ ತಿಳಿಸಲಾಗಿದೆ.
ಪುಣೆಯ ಮಂಜಿರಾ ಪ್ರದೇಶದಲ್ಲಿರುವ ಇನ್ಸ್ಟಿಟ್ಯೂಟ್ನ ಟರ್ಮಿನಲ್ ಗೇಟ್-1 ಒಳಗಿನ SEZ-3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಬೆಂಕಿ ಗುರುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕ ದಳ ಮತ್ತು ಎನ್ಡಿಆರ್ಎಫ್ ತಂಡ ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸುವುದರ ಜತೆ ಕಟ್ಟಡದ ಒಳಗಿದ್ದವರ ರಕ್ಷಣಾ ಕಾರ್ಯವನ್ನು ನಡೆಸಲಾಗಿತ್ತು. ನಿರ್ಮಾಣ ಹಂತದಲ್ಲಿದ್ದ ಕಟ್ಟಡವಾಗಿದ್ದರಿಂದ ಯಾವುದೇ ಲಸಿಕೆ ಅಲ್ಲಿರಲಿಲ್ಲ. ವೆಲ್ಡಿಂಗ್ ಮಾಡಲಾಗುತ್ತಿದ್ದು ಅದರಿಂದಲೇ ಬೆಂಕಿ ಹತ್ತಿರಬಹುದು ಎಂದು ಊಹಿಸಲಾಗಿತ್ತು.
ಬೆಂಕಿ ನಂದಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಮತ್ತೊಂದು ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಹೇಳಲಾಗಿದೆ. ಬೆಂಕಿ ನಂದಿಸುವ ಕಾರ್ಯ ಸಂಜೆಯೂ ಮುಂದುವರಿದಿದೆ.
ಅವಘಡದಲ್ಲಿ ಸಾವನ್ನಪ್ಪಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ. ಈ ಕುರಿತಾಗಿ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದರ್ ಪೂನವಾಲ್ಲಾ ಮಾತನಾಡಿದ್ದು, "ದುಃಖಕರ ಸಂಗತಿ ನಡೆದಿದೆ. ಈ ಘಟನೆಯಲ್ಲಿ ದುರದೃಷ್ಟವಶಾತ್ ಕೆಲವು ಪ್ರಾಣಹಾನಿಯೂ ಆಗಿದೆ. ನಾವು ತುಂಬಾ ದುಃಖಿತರಾಗಿದ್ದೇವೆ ಮತ್ತು ಅಗಲಿದವರ ಕುಟುಂಬ ಸದಸ್ಯರಿಗೆ ನಮ್ಮ ಆಳವಾದ ಸಂತಾಪವನ್ನು ಸಲ್ಲಿಸುತ್ತೇವೆ" ಎಂದು ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡುವುದಾಗಿ ಸಂಸ್ಥೆ ತಿಳಿಸಿದೆ. (ಏಜನ್ಸೀಸ್)