

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಸಲ್ಲಿಸಿರುವ ಅರ್ಜಿಗಳ ತಿದ್ದುಪಡಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎರಡನೇ ಬಾರಿ ಅವಕಾಶ ನೀಡಿದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ವಿವರಗಳನ್ನು ಅರ್ಹತೆಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು. ಪ್ರವರ್ಗ ಮೀಸಲಾತಿ, ಕನ್ನಡ ಮಾಧ್ಯಮ, ಗ್ರಾಮೀಣ, ವಿಶೇಷ ಕೆಟಗರಿ ಇತ್ಯಾದಿಗಳನ್ನು ಅರ್ಜಿಯಲ್ಲಿ ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.
ಅಭ್ಯರ್ಥಿಯ ಹೆಸರು, ತಂದೆ-ತಾಯಿ ಹೆಸರು, ಮೊಬೈಲ್ ಫೋನ್ ಸಂಖ್ಯೆ, ಇ-ಮೇಲ್ ಐಡಿ, ರಾಷ್ಟ್ರೀಯತೆ, ಅರ್ಹತಾ ಕಂಡಿಕೆ, ಪರೀಕ್ಷೆ ಬರೆಯುವ ಸ್ಥಳ ಇತ್ಯಾದಿಗಳ ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ತಿದ್ದುಪಡಿಗೆ ಆ.5ರ ರಾತ್ರಿ ಎಂಟು ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.