ದೃಷ್ಟಿ ತೆಗೆದ್ರು, ಆರತಿ ಮಾಡಿದ್ರು, ಧನ್ಯತೆಯಿಂದ ನಮಿಸಿದ್ರು; ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಪದ್ಮಪುರಸ್ಕಾರ ಸಮಾರಂಭ..

Edit F
Published on

ಪದ್ಮ ಪುರಸ್ಕಾರ ಪ್ರದಾನ ಸಮಾರಂಭದ ಎರಡನೇ ದಿನದ ಕಾರ್ಯಕ್ರಮ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಜರುಗಿತು. ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು. ಹಲವು ಭಾವುಕ ಹಾಗೂ ಸಾರ್ಥಕ ಕ್ಷಣಗಳಿಗೆ ಈ ಸಮಾರಂಭ ಸಾಕ್ಷಿಯಾಯಿತು. ಪ್ರಶಸ್ತಿ ಪುರಸ್ಕೃತರನ್ನು ರಾಷ್ಟ್ರಪತಿ ಭವನದ ಸಿಬ್ಬಂದಿ ಆರತಿ ಬೆಳಗಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. 2021ನೇ ಸಾಲಿನಲ್ಲಿ ಏಳು ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 102 ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿತ್ತು. ಸೋಮವಾರ ಮತ್ತು ಮಂಗಳವಾರ ಈ ಎರಡೂ ವರ್ಷಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರೊನಾ ಹಾವಳಿಯ ಕಾರಣ 2020ರಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ.

ಬಹುಮುಖ ಪ್ರತಿಭೆಯ ವೈದ್ಯ

ಪದ್ಮವಿಭೂಷಣ ಪುರಸ್ಕಾರಕ್ಕೆ ಪಾತ್ರರಾದ ಮಂಗಳೂರಿನ ಹಿರಿಯ ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗ್ಡೆ(ಬೆಳ್ಳೆ ಮೋನಪ್ಪ ಹೆಗ್ಡೆ) ವೈದ್ಯ, ಅಧ್ಯಾಪಕ, ಪರೀಕ್ಷಕ, ಸಂಶೋಧಕ, ಬರಹಗಾರ, ಶಿಕ್ಷಣ ತಜ್ಞ.. ಹೀಗೆ ಬಹುಮುಖ ಪ್ರತಿಭೆಯವರು. ವೈದ್ಯಕೀಯ ರಂಗದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಬಲ್ಲ ಅಪರೂಪದ ನಿಷ್ಠುರವಾದಿ ವೈದ್ಯರು. ಆಧುನಿಕ ವೈದ್ಯಕೀಯ ಕ್ಷೇತ್ರದ ಅನಗತ್ಯ ತಪಾಸಣೆ, ಔಷಧ ಬಳಕೆ ಹಾಗೂ ಚಿಕಿತ್ಸೆಯನ್ನು ಖಂಡಿಸಿ ಜನಜಾಗೃತಿ ಮಾಡಿಸುತ್ತಿರುವವರು. ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿಎಂಜೆ) ರೆಫ್ರಿಯಾಗಿಯೂ ಕೆಲಸ ಮಾಡುತ್ತಿರುವರು. ಬಿ.ಎಂ.ಹೆಗ್ಡೆಯವರ ಹುಟ್ಟೂರು ಉಡುಪಿಯ ಬೆಳ್ಳೆ. ಪ್ರೊ.ಬೆರ್ನಾರ್ಡ್ ಲೋವ್ನ್​ನಂತಹ ನೊಬೆಲ್ ಪಾರಿತೋಷಕ ಪುರಸ್ಕೃತ ವೈದ್ಯರೊಂದಿಗೆ ಕೆಲಸ ಮಾಡಿದ ಹೆಗ್ಡೆಯವರು ಲಂಡನ್ನಿನ ಕಾಲೇಜುಗಳ ಎಂಆರ್​ಸಿಪಿ ಪರೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯ. ಕಸ್ತೂರಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಪ್ರಾಚಾರ್ಯರಾಗಿ, ಡೀನ್ ಆಗಿ ಕೊನೆಗೆ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ (ಮಾಹೆ) ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ಈಗ ಮಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ.ಬಿ.ಸಿ.ರಾಯ್ ಪ್ರಶಸ್ತಿಗೆ 1999ರಲ್ಲಿ ಭಾಜನರಾದ ಹೆಗ್ಡೆಯವರು 2010ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದರು.

ವೇದಾಂಗ ವಿದ್ವಾಂಸ

ವಿಜ್ಞಾನ-ತಂತ್ರಜ್ಞಾನ ರಂಗದಿಂದ ಬಂದು, ಅಲ್ಲಿ ಸಾಧನೆಯ ಹೆಜ್ಜೆಗುರುತು ಮೂಡಿಸಿದ ಡಾ.ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ ವೇದದ ಇಪ್ಪತೆôದು ಸಾವಿರ ಮಂತ್ರಗಳಿಗೂ ಆಂಗ್ಲ ಭಾಷೆಯಲ್ಲಿ ಅರ್ಥ ಬರೆದು ಪ್ರಕಟಿಸಿದ್ದಾರೆ. ಇವರು ಹೊರತಂದ ಋಗ್ವೇದದ 12, ಕೃಷ್ಣಯಜುರ್ ವೇದದ 4, ಅಥರ್ವವೇದದ 6, ಸಾಮವೇದದ 2, ಶುಕ್ಲಯಜುರ್ ವೇದದ 3 ಸಂಪುಟಗಳು ವೇದಾಸಕ್ತರ ಜ್ಞಾನದ ಹಸಿವನ್ನು ತಣಿಸುತ್ತಿವೆ. ವೇದವು ಮನೆ-ಮನೆಗೂ ತಲುಪಬೇಕು ಎಂಬ ಉದ್ದೇಶದಿಂದಲೇ ಕಶ್ಯಪರು 1997ರಲ್ಲಿ ಬೆಂಗಳೂರಿನಲ್ಲಿ ‘ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆ’ (ಸಾಕ್ಷಿ)ಯನ್ನು ಸ್ಥಾಪಿಸಿದ್ದಾರೆ. ವೇದಜ್ಞಾನ ಸಂರಕ್ಷಣೆ, ಸಂಶೋಧನೆ ಹಾಗೂ ಪ್ರಸಾರ ಕಾರ್ಯದಲ್ಲಿ ಈ ಸಂಸ್ಥೆ ಗಮನಾರ್ಹವಾಗಿ ಕೆಲಸ ಮಾಡುತ್ತಿದೆ. ನಾಲ್ಕು ವೇದಗಳ ಮಂತ್ರಗಳ ಅರ್ಥವ್ಯಾಖ್ಯಾನವನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುವ ಕೆಲಸವೂ ನಡೆಯುತ್ತಿದೆ. ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕಶ್ಯಪರು ದೇಶ-ವಿದೇಶಗಳಲ್ಲಿ 350ಕ್ಕೂ ಅಧಿಕ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

ಇದು ನನಗೆ ದೊರೆತ ವೈಯಕ್ತಿಕ ಪ್ರಶಸ್ತಿ ಅಷ್ಟೇ ಅಲ್ಲ, ಭಾರತ ಸರ್ಕಾರ ಈ ಮೂಲಕ ವೇದಕ್ಕೆ, ಆ ಶ್ರೇಷ್ಠ ಪರಂಪರೆಗೆ ಮನ್ನಣೆ ನೀಡಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭವೂ ಆತ್ಮೀಯವಾಗಿತ್ತು.

| ಆರ್.ಎಲ್.ಕಶ್ಯಪ

ಕಲೆಯ ಆರಾಧಕಿ

ಕಲೆಯನ್ನೇ ದೈವವಾಗಿಸಿಕೊಂಡು ಸಮಾಜದಲ್ಲಿ ತೃತೀಯ ಲಿಂಗಿಗಳು ಹೀಗೂ ಜೀವಿಸಬಹುದು ಎಂದು ತೋರಿಸಿ ಕೊಟ್ಟವರು ಮರಿಯಮ್ಮನಹಳ್ಳಿಯ ಮಾತಾ ಮಂಜಮ್ಮ ಜೋಗತಿ. ಚಿಕ್ಕವಯಸ್ಸಿ ನಲ್ಲೇ ಪುರುಷನಿಂದ ತೃತೀಯಲಿಂಗಿಯಾಗಿ ಪರಿವರ್ತನೆಯಾಗಿರುವ ಇವರು, ಜೀವನದುದ್ದಕ್ಕೂ ರೇಣುಕಾ ಯಲ್ಲಮ್ಮನ ಪದಗಳು ಹಾಗೂ ಜಾನಪದ ನೃತ್ಯ ಕಲೆಯನ್ನು ಪ್ರೀತಿಸಿ, ಪೋಷಿಸಿ ಹೆಸರು ಮಾಡಿದವರು. ತಮ್ಮೊಟ್ಟಿಗೆ 12 ಮಂದಿ ತೃತೀಯ ಲಿಂಗಿಗಳಿಗೂ ಜಾನಪದ ಕಲೆ, ಪರಂಪರೆಯ ಶಿಕ್ಷಣ ಕೊಟ್ಟಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಎಚ್.ಎಲ್.ನಾಗೇಗೌಡ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

ರಾಷ್ಟ್ರಪತಿಗೆ ದೃಷ್ಟಿ ಆಗಿತ್ತು, ಅದಕ್ಕೇ ತೆಗೆದೆ!

‘ಕಳೆದ 2 ದಿನಗಳಿಂದ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿ, ಜನರ ಮನದೊಳಗೆ ಸ್ಥಾನ ಪಡೆದಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಮೇಲೆ ಎಲ್ಲರ ದೃಷ್ಟಿ ಬಿದ್ದಿತ್ತು ಅಲ್ಲವೇ.. ಅದಕ್ಕೆ ನಾನು ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದೆ...’ ಹೀಗೆ ಹೇಳಿದ್ದು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ. ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಸ್ವೀಕರಿಸುವ ಮುನ್ನ ಅವರು ರಾಷ್ಟ್ರಪತಿಗಳ ದೃಷ್ಟಿ ತೆಗೆಯುತ್ತಿದ್ದಂತೆಯೇ ನೆರೆದಿದ್ದ ಗಣ್ಯರೆಲ್ಲರೂ ಚಪ್ಪಾಳೆ ಮೂಲಕ ಅಭಿನಂದಿಸಿದರು. ರಾಷ್ಟ್ರಪತಿಯವರ ದೃಷ್ಟಿ ತೆಗೆಯಬೇಕೆಂಬುದು ತಕ್ಷಣಕ್ಕೆ ಬಂದ ಯೋಚನೆ. ಸಾಮಾನ್ಯವಾಗಿ ಮಂಗಳಮುಖಿಯರನ್ನು ಅನೇಕರು ದೈವೀ ಭಾವನೆಯಿಂದ ಕಾಣುತ್ತಾರೆ. ನಮ್ಮ ಆಶೀರ್ವಾದವನ್ನು ನಿರೀಕ್ಷಿಸುತ್ತಾರೆ. ನಾನು ಭೇಟಿಯಾಗುವ ಅನೇಕರಿಗೆ ಹೀಗೆ ಮಾಡುತ್ತೇನೆ. ರಾಷ್ಟ್ರಪತಿ ಬಳಿ ತೆರಳಿದಾಗಲೂ ಹಾಗೆ ಮಾಡಿದೆ ಎಂದರು.

ವೃಕ್ಷಮಾತೆಯ ಮುಗ್ಧತೆ

ವೃಕ್ಷಮಾತೆ ತುಳಸಿ ಗೌಡ ಸೋಮವಾರ ನಡೆದ ಪದ್ಮಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸಾಲಿನಲ್ಲಿ ಕುಳಿತಿದ್ದ ಗಣ್ಯರಿಗೆ ನಮಸ್ಕಾರ ಮಾಡಿದ್ದಾರೆ. ಇದಕ್ಕೆ ಮೋದಿ ಮತ್ತು ಷಾ ಕೂಡ ಕೈಜೋಡಿಸಿ ಪ್ರತಿನಮಸ್ಕಾರ ಮಾಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ಮೋದಿ ಅವರು ತುಳಸಿ ಅವರ ಕೈಗಳನ್ನು ಹಿಡಿದು ಅಭಿನಂದಿಸುತ್ತಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇದಕ್ಕೆ ಅನೇಕರು ‘ದಿನದ ಚಿತ್ರ’ ಎಂಬ ಅಡಿ ಟಿಪ್ಪಣಿಯನ್ನು ಬರೆದು ರೀಟ್ವೀಟ್ ಮಾಡಿದ್ದಾರೆ. 77 ವರ್ಷದ ತುಳಸಿ ಗೌಡ, ಹಾಲಕ್ಕಿ ಬಡುಕಟ್ಟು ಸಮುದಾಯದ ದಿರಿಸಿನಲ್ಲಿ ಮತ್ತು ಬರಿಗಾಲಲ್ಲಿ ಬಂದು ಪ್ರಶಸ್ತಿ ಸ್ವೀಕರಿಸಿದ್ದರು.

ಸಾರಸ್ವತ ಲೋಕದ ಪ್ರತಿಭೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರಿಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಗರಿಯೂ ಲಭಿಸಿದೆ. ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರರೂ ಆಗಿರುವ ಕಂಬಾರರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಬೆಂಗಳೂರು ವಿವಿ ಅಧ್ಯಾಪಕರಾಗಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ, ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಹಂಪಿ ಕನ್ನಡ ವಿವಿ ಕುಲಪತಿಯಾಗಿ ಹೀಗೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು ಸದ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವು ಕೃತಿಗಳು ನಾಟಕಗಳಾಗಿ, ಸಿನಿಮಾ ಆಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಪದ್ಮಶ್ರೀ ಪ್ರಶಸ್ತಿ ಪಡೆದಿದ್ದು ನನಗೆ ಬಹಳ ಸಂತೋಷ ತಂದಿದೆ. ಇದಕ್ಕಿಂತ ಹೆಚ್ಚೇನೂ ಹೇಳಲಾಗದು.

| ಡಾ. ಚಂದ್ರಶೇಖರ ಕಂಬಾರ

ಕೈ ಸ್ಪರ್ಶಿಸಿದ ಪ್ರಧಾನಿ: ಚಹಾಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ದ್ದರು. ಅಲ್ಲಿ ಪ್ರಧಾನಿ ನನ್ನ ಕೈ ಮುಟ್ಟಿದರು. 3 ದಿನಗಳ ಹಿಂದೆ ಜಿಲ್ಲಾಡಳಿತದ ವತಿಯಿಂದ ನನ್ನ ಮನೆಗೆ ಆರ್​ಟಿಪಿಸಿಆರ್ ಪರೀಕ್ಷೆಗಾಗಿ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು. ಅವರಿಗೆ ಸೀಯಾಳ ಕತ್ತರಿಸಲು ಹೋದಾಗ ಎಡಗೈಯ ಹೆಬ್ಬೆರಳಿಗೆ ಕತ್ತಿ ತಾಗಿತ್ತು. ಬ್ಯಾಂಡೇಜ್ ಹಾಕಲಾಗಿತ್ತು. ಆ ಬ್ಯಾಂಡೇಜ್​ನೊಂದಿಗೆ ಪ್ರಶಸ್ತಿ ಸ್ವೀಕರಿಸಿದೆ. ಅದೇ ಕೈಯನ್ನು ಪ್ರಧಾನಿ ರ್ಸ³ಸಿದರು’ ಎಂದು ಹಾಜಬ್ಬ ಮಂಗಳೂರಿನಲ್ಲಿ ಪೌರ ಸನ್ಮಾನ ಸ್ವೀಕರಿಸಿ ಹೇಳಿದರು.

ಸಾಧನೆ-ಸೇವೆಗೆ ಸಂದ ಗೌರವ

ಶಿಕಾರಿಪುರ: ಯಶಸ್ವಿ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದ್ದು, ಅವರ ಸಾಮಾಜಿಕ ಕಳಕಳಿ ಮತ್ತು ಸಮಾಜಸೇವೆಗೆ ಸಿಕ್ಕ ಗೌರವ ಎಂದು ಶಿವಮೊಗ್ಗ ಜಿಲ್ಲಾ ವೀರಶೈವ ಮಠಾಧೀಶರ ಪರಿಷತ್ ಬಣ್ಣಿಸಿದೆ. ಸಾರಿಗೆ ಉದ್ಯಮದಲ್ಲಿ ಅವರು ತೋರಿರುವ ಸಾಧನೆ ದೇಶಕ್ಕೆ ಮಾದರಿ. ಸಾವಿರಾರು ಕುಟುಂಬಗಳಿಗೆ ಅನ್ನದಾತರಾಗಿ ಮುಂದಿನ ಪೀಳಿಗೆಗೆ ಕಾಯಕದ ಅರಿವು ಮೂಡಿಸಿ ಮಾರ್ಗದರ್ಶಕರಾಗಿದ್ದಾರೆ ಎಂದು ಮಠಾಧೀಶರ ಪರಿಷತ್ ಅಧ್ಯಕ್ಷ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕಾರ್ಯದರ್ಶಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಮಳೇಹಿರೇಮಠದ ಶ್ರೀ ಮಹಾಂತದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ 57 ಸದಸ್ಯರು ತಿಳಿಸಿದ್ದಾರೆ.

ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವುದು ಸಂತಸದ ಸಂಗತಿ. ಸರಕು ಸಾಗಣೆ, ಸಾರಿಗೆ ಉದ್ಯಮ, ಪತ್ರಿಕೋದ್ಯಮ ಸೇರಿ ಹಲವು ರಂಗಗಳಲ್ಲಿ ತೊಡಗಿಕೊಂಡು ಎಲ್ಲವನ್ನೂ ಯಶಸ್ಸಿನತ್ತ ಕೊಂಡೊಯ್ದಿರುವುದು ಅವರ ಬದ್ಧತೆ ಹಾಗೂ ಮುಂದಾಲೋಚನೆಗೆ ಸಾಕ್ಷಿ. ನಾಡಿನ ಯುವಶಕ್ತಿಗೆ ಅವರ ಜೀವನಯಶೋಗಾಥೆ ಪ್ರೇರಣೆ ನೀಡಲಿ.

| ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠ

ಪದ್ಮವಿಭೂಷಣ

  • ಶಿಂಜೊ ಅಬೆ (ಜಪಾನಿ ಮಾಜಿ ಪ್ರಧಾನಿ)
  • ಡಾ.ಎಸ್.ಪಿ. ಬಾಲಸುಬ್ರಮಣ್ಯಂ (ಮರಣೋತ್ತರ)
  • ಡಾ.ಬಿ.ಎಂ.ಹೆಗ್ಡೆ (ಕರ್ನಾಟಕದ ಹೆಸರಾಂತ ವೈದ್ಯ)
  • ಪ್ರೊ.ಬೃಜ್ ಬಾಸಿ ಲಾಲ್ (ಎಎಸ್​ಐ ಮಾಜಿ ಮಹಾನಿರ್ದೇಶಕ)
  • ಸುದರ್ಶನ್ ಸಾಹೂ (ಒಡಿಶಾದ ಶಿಲ್ಪಿ)

ಪದ್ಮಭೂಷಣ

  • ತರುಣ್ ಗೊಗೊಯ್ (ಅಸ್ಸಾಂನ ಮಾಜಿ ಸಿಎಂ, ಮರಣೋತ್ತರ)
  • ಸುಮಿತ್ರಾ ಮಹಾಜನ್ (ಲೋಕಸಭೆಯ ಮಾಜಿ ಸ್ಪೀಕರ್)
  • ನೃಪೇಂದ್ರ ಮಿಶ್ರಾ (ಪ್ರಧಾನಿ ಮೋದಿಯವರ ಮಾಜಿ ಪ್ರಧಾನ ಕಾರ್ಯದರ್ಶಿ)
  • ರಾಮ್​ಲಾಸ್ ಪಾಸ್ವಾನ್ (ಕೇಂದ್ರದ ಮಾಜಿ ಸಚಿವ, ಮರಣೋತ್ತರ)
  • ಕೇಶುಭಾಯಿ ಪಟೇಲ್ (ಗುಜರಾತ್​ನ ಮಾಜಿ ಸಿಎಂ, ಮರಣೋತ್ತರ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net