

ನವದೆಹಲಿ: ಈ ಶತಮಾನದಲ್ಲಿ ಸಮುದ್ರ ಮಟ್ಟದ ಏರಿಕೆಯಿಂದ ಚೆನ್ನೈ ಮತ್ತು ಕೋಲ್ಕತಾ ಸಹಿತ ಏಷ್ಯಾದ ಅನೇಕ ಮಹಾನಗರಗಳಿಗೆ ಅಪಾಯ ಉಂಟಾಗಲಿದೆ ಎಂದು ಹೊಸ ಅಧ್ಯಯನವೊಂದು ಆತಂಕ ವ್ಯಕ್ತಪಡಿಸಿದೆ. ಶಾಂತ ಮಹಾಸಾಗರದ ಪಶ್ಚಿಮದ ದ್ವೀಪಗಳು ಮತ್ತು ಹಿಂದು ಮಹಾಸಾಗರದ ಪಶ್ಚಿಮ ಭಾಗಗಳಿಗೆ ಕೂಡ ಅಪಾಯ ಎದುರಾಗಲಿದೆ ಎಂದು ಸಂಶೋಧಕರ ತಂಡ ತನ್ನ ವರದಿಯಲ್ಲಿ ಹೇಳಿದೆ.
ಹಸಿರುಮನೆ ಅನಿಲ ಬಿಡುಗಡೆ ಮಾಡುವ ಪ್ರಮಾಣವನ್ನು ಮುಂದುವರಿಸಿದರೆ 2100ರ ಹೊತ್ತಿಗೆ ಚೆನ್ನೈ, ಕೋಲ್ಕತಾ, ಬ್ಯಾಂಕಾಂಕ್, ಹೊ ಚಿ ಮಿನ್ಹ್ ಸಿಟಿ, ಯಾಂಗಾನ್ ಮತ್ತು ಮನಿಲಾ ಮೊದಲಾದ ಮಹಾನಗರಗಳಿಗೆ ಗಂಭೀರ ಅಪಾಯವಿದೆ ಎಂದು ಅದು ಅಭಿಪ್ರಾಯಪಟ್ಟಿದೆ. ತಾಪಮಾನ ಬದಲಾ ವಣೆಯಿಂದ ಸಮುದ್ರ ಮಟ್ಟದ ಮೇಲಾಗುವ ಪರಿಣಾಮ ಗಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.
ಸಾಗರದ ತಾಪಮಾನ ಏರಿಕೆಯಿಂದ ಸಮುದ್ರ ಮಟ್ಟಗಳಲ್ಲಿ ಏರಿಕೆಯಾಗುವುದೆಂದು ವಿಜ್ಞಾನಿಗಳಿಗೆ ಹಿಂದಿನಿಂದಲೂ ತಿಳಿದಿರುವ ವಿಚಾರವೇ ಆಗಿದೆ. ನೀರು ಬಿಸಿಯಾದಾಗ ಅದು ಹಿಗ್ಗುವುದೇ ಅದಕ್ಕೆ ಕಾರಣ. ಹಿಮ ಪದರಗಳು ಕರಗಿ ಸಾಗರಗಳಿಗೆ ನೀರನ್ನು ಬಿಡುಗಡೆ ಮಾಡುವುದು ಕೂಡ ಕಾರಣವಾಗಿದೆ. ಎಲ್ ನಿನೋದಂಥ ವಿದ್ಯಮಾನಗಳಿಂದ ಸಮುದ್ರದ ಮಟ್ಟದಲ್ಲಿ ನೈಸರ್ಗಿಕವಾಗಿ ಏರಿಳಿತ ವಾಗುವುದು ಅಥವಾ ಜಲ ಚಕ್ರದಲ್ಲಿ ಬದಲಾವಣೆಗಳಾಗುವುದು ಮೊದಲಾದವನ್ನು ಒಳಗೊಂಡಿರುವುದು ಅಧ್ಯಯನದ ಗಮನಾರ್ಹ ಅಂಶವಾಗಿದೆ.
ಜಾಗತಿಕ ಹವಾಮಾನದ ಕಂಪ್ಯೂಟರ್ ಮಾದರಿ ಮತ್ತು ಮತ್ತು ವಿಶೇಷ ಅಂಕಿಸಂಖ್ಯೆ ಮಾದರಿ ಎರಡನ್ನೂ ಬಳಸಿಕೊಂಡು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ನೈಸರ್ಗಿಕ ಏರಿಳಿತದ ಪರಿಣಾಮ ಎಷ್ಟರ ಮಟ್ಟಿಗಿರಬಹುದು ಎನ್ನುವುದನ್ನು ನಿರ್ಧರಿಸಲು ಅದು ನೆರವಾಗುತ್ತದೆ. ಕೆಲವು ಕರಾವಳಿ ಪ್ರದೇಶಗಳಲ್ಲಿ ತಾಪಮಾನ ಬದಲಾವಣೆಯ ಪರಿಣಾಮವನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಬಹುದು ಅಥವಾ ತಗ್ಗಿಸಬಹುದು ಎನ್ನುವುದನ್ನು ನಿರ್ಧರಿಸಲು ಕೂಡ ಅದು ಸಹಾಯಕವಾಗುತ್ತದೆ.