

ದೇವಸ್ಥಾನ ಕಟ್ಟುವ ಶಿಲ್ಪಿಯು ಜೇನಿನಂತೆ ಪರೋಪಕಾರಿ. ಶಿಲ್ಪಿಗಳು ತಪಸ್ಸನ್ನು ಮಾಡಿ ಏಕಾಗ್ರತೆಯಿಂದ ಶಿಲ್ಪವನ್ನು ಕೆತ್ತುವರು. ಆದುದರಿಂದಲೇ ಶಿಲ್ಪಿಗಳಿಗೆ ಅಗ್ರಸ್ಥಾನವಿದೆ. ಸಿಂಧೂನಾಗರಿಕತೆಯಿಂದ ಭಾರತೀಯ ವಾಸ್ತುಶಿಲ್ಪ ಮತ್ತು ಇತರ ಕಲೆಗಳ ಚರಿತ್ರೆ ಪ್ರಾರಂಭವಾಗುತ್ತದೆೆ.
ವಾಸ್ತುಶಾಸ್ತ್ರ-ವಾಸ್ತುವೇದ: ವಾಸ್ತುಶಾಸ್ತ್ರವು ಪ್ರಮುಖವಾದ ಹಿಂದೂ ನಿರ್ಮಾಣ ವಿಧಾನವಾಗಿದೆ. ದೇವಸ್ಥಾನ ನಿರ್ವಣದಲ್ಲಿ ಇದು ಅತೀ ಮುಖ್ಯವಾದ ಅಂಶ. ವಾಸ್ತುಶಾಸ್ತ್ರವನ್ನು ದೇವಾಲಯ ಮತ್ತು ಮನುಷ್ಯಾಲಯ ನಿರ್ವಣಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ನಗರಗಳ ನಿರ್ವಣಗಳ ಕುರಿತು ವಿಚಾರಗಳು ಲಭ್ಯವಿವೆ. ಇಲ್ಲಿ ನಿವೇಶನದ ಆಯ್ಕೆ, ಮನೆಯ ಉದ್ದಗಲ, ಎತ್ತರ ಮತ್ತು ವಿನ್ಯಾಸ, ನೋಡಬೇಕಾದ ತಿಥಿ-ವಾರ, ಉಪಯೋಗಿಸಬೇಕಾದ ಮರಗಳು ಈ ಎಲ್ಲ ವಿಷಯಗಳು ಬರುತ್ತವೆ. ಮತ್ಸ್ಯೂಪಿಯಾದ ವಿಷ್ಣುವಿನಿಂದ ಮನುವಿಗೆ ಇದು ಉಪದಿಷ್ಟವಾಗಿದೆ.
ಮೂಲ ಪರಿಕಲ್ಪನೆ: ಪಾರಂಪರಿಕ ಆಗಮಕೇಂದ್ರಿತ ವಾಸ್ತುಶಾಸ್ತ್ರದಲ್ಲಿ ಬಹಳಷ್ಟು ಪರಿಕಲ್ಪನೆಗಳನ್ನು ಆಗಮತಂತ್ರಗಳಿಂದಲೇ ಪಡೆಯಲಾಗಿದೆ. ಇದರಲ್ಲಿ ‘ವಾಸ್ತುಸೂತ್ರೋಪನಿಷತ್’ ಎನ್ನುವ ಗ್ರಂಥದಲ್ಲಿ ವಿವರಿಸಿದಂತಹ ವೈದಿಕ ಮೂಲವಾದ ಮತ್ತು ಆಗಮಗಳಲ್ಲಿ ಸ್ವತಂತ್ರವಾಗಿರುವ ಪರಿಕಲ್ಪನೆಗಳಿವೆ. ಬಹಳ ಗೌಣವಾಗಿ ಯೋಗಶಾಸ್ತ್ರ ಮತ್ತಿತರ ದರ್ಶನಶಾಸ್ತ್ರದ ಕೇಂದ್ರಿತ ಕಲ್ಪನೆಗಳು ಇವೆ.
ಶಾಸ್ತ್ರಗಳು: ಬೃಹ್ಮಸೃಷ್ಟಿ, ವಿಶ್ವಕರ್ಮ (ವಿಶ್ವಕರ್ಮನ ರಚನೆ), ಕಾಶ್ಯಪಶಿಲ್ಪ, ಮಾನಸಾರ ಶಿಲ್ಪಶಾಸ್ತ್ರ, ಮಯಮತ (ಮಯಾಸುರನ ರಚನೆ), ಸಮರಾಂಗಣ ಸೂತ್ರಧಾರ (ರಾಜಭೋಜನ ರಚನೆ), ಅಪರಾಜಿತ ಪೃಚ್ಛ (ವಿಶ್ವಕರ್ಮ ಮತ್ತು ಅವನ ಮಗ ಅಪರಾಜಿತರ ನಡುವಿನ ಮಾತುಕತೆ), ಶಿಲ್ಪರತ್ನ, ಮನುಷ್ಯಾಲಯ ಚಂದ್ರಿಕಾ, ತಂತ್ರಸಮುಚ್ಚಯ, ಶೇಷಸಮುಚ್ಚಯ, ವಾಸ್ತುಸೂತ್ರೋಪನಿಷತ್.
ಸುಪ್ರಭೇದಾಗಮಗಳಲ್ಲಿ ದೇವಾಲಯಗಳ ಶೈಲಿಯನ್ನಾಧರಿಸಿ ನಾಗರ, ವೇಸರ, ದ್ರಾವಿಡ ಎಂದು ವರ್ಗೀಕರಿಸಲಾಗಿದೆ. ಮಯಮತ, ವೈಖಾನಸಾಗಮ, ವಿಮಾನಾರ್ಚನಕಲ್ಪ, ದೀಪ್ತಾಗಮ, ಕಾರವಾಗಮ ಮುಂತಾದ ಗ್ರಂಥಗಳಲ್ಲಿ ಶಿಲ್ಪ ಮತ್ತು ದೇವಾಲಯಗಳ ಪ್ರಭೇದವನ್ನು ಮಾಡಲಾಗಿದೆ.
ವಾಸ್ತುಪುರುಷ ಮಂಡಲ ಎನ್ನುವುದು ವಾಸ್ತುಶಾಸ್ತ್ರದಲ್ಲಿ ಅತ್ಯಗತ್ಯ ಭಾಗ. ಹಿಂದೂ ವಿಶ್ವವಿಜ್ಞಾನದ ಪ್ರಕಾರ ಭೂಮಿಯ ಮೇಲ್ಮೈ ಚೌಕ, ಭೂಮಿಯು ವಾಸ್ತುಪುರುಷ ಮಂಡಲದ ನಾಲ್ಕು ಬದಿಗಳನ್ನು ದಿಗಂತವೆಂದೂ ಸೂರ್ಯಾಸ್ತ ಹಾಗೂ ಸೂರ್ಯೋದಯ ಹಾಗೂ ಉತ್ತರ-ದಕ್ಷಿಣ ದಿಕ್ಕುಗಳೆನ್ನಲಾಗಿದೆ. ಗುರುತ್ವಾಕರ್ಷಣಾ ಶಕ್ತಿಯ ಅಧಿಪತಿಯೇ ವಾಸ್ತುಪುರುಷ. ಭೂಮಿ ಮೇಲೆ ನಿರ್ವಿುಸಿದ ಎಂಥದೇ ಕಟ್ಟಡದಲ್ಲಿ ವಾಸ್ತುಪುರುಷ ವಾಸಿಸುತ್ತಾನೆ ಮತ್ತು ನಿಯಮಗಳನುಸಾರ ಅದರೊಳಗೆ ಪ್ರವೇಶಿಸುವ ದುಷ್ಟಶಕ್ತಿಗಳನ್ನು ನಿಯಂತ್ರಿಸುತ್ತಾನೆ.
ದೇವಾಲಯ ವಾಸ್ತುವನ್ನು ಮೂರು ವಿಭಾಗವಾಗಿ ವಿಂಗಡಿಸಿರುವರು. ಉತ್ತರದ ಹಿಮಾಲಯದಿಂದ ವಿಂಧ್ಯಪರ್ವತಗಳವರೆಗೆ ನಾಗರಶೈಲಿಯೆಂದು, ಇಲ್ಲಿಂದ ಕೃಷ್ಣಾನದಿಯವರೆಗೆ ವೇಸರಶೈಲಿ ಎಂಬುದಾಗಿ ಮತ್ತು ಅದರ ಕೆಳಗಿನದ್ದು ದ್ರಾವಿಡಶೈಲಿ ಎಂದು ಕರೆಯಲಾಗಿದೆ. ಉತ್ತರದ ಶೈಲಿಯನ್ನು ಕಾಶ್ಯಪ ವಾಸ್ತು ಮತ್ತು ದಕ್ಷಿಣದ ಶೈಲಿಯನ್ನು ಭೃಗುಸಂಹಿತೆ ವಾಸ್ತು ಎಂಬುದಾಗಿ ಗುರುತಿಸಿದ್ದಾರೆ. ಇವೆರಡರ ನಡುವಿನದ್ದು ನಾಗರ-ದ್ರಾವಿಡ ವಾಸ್ತುಗಳ ಮಿಶ್ರಣವಾಗಿರುತ್ತದೆ. ಕರ್ನಾಟಕದ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಎಲ್ಲ ವಿಧದ ವಾಸ್ತುಶೈಲಿಯ ನಿರ್ವಣಗಳನ್ನು ಕಾಣಬಹುದು. ಚಾಲುಕ್ಯ ಚಕ್ರವರ್ತಿಗಳು ಶಿಲ್ಪಕಲಾ ಪ್ರಪಂಚಕ್ಕೆ ಕೊಟ್ಟಿರುವ ಅತಿ ದೊಡ್ಡ ಕೊಡುಗೆ ಇದು.
ನಾಗರಶೈಲಿಯಲ್ಲಿ ಗರ್ಭಗೃಹದ ಮೇಲಿನ ಭಾಗವು ವೃತ್ತಾಕಾರವಾಗಿರುವುದು ವೇಸರ ಎಂದು ಹೇಳಲಾಗಿದೆ. ಇದು ದ್ರಾವಿಡ ಶೈಲಿ. ನಾಗರಶೈಲಿಯ ದೇವಾಲಯಗಳಲ್ಲಿ ಪೀಠ, ಜಂಘಾ, ಶಿಖರ, ಆಮಲಸಾರ, ಕಲಶ ಈ ಭಾಗಗಳಿರುತ್ತವೆ. ಭಾರತದ ಉಳಿದೆಡೆ ಕಾಣಲಾರದಷ್ಟು ಉತ್ತರಭಾರತದಲ್ಲಿ ನಾಗರಶೈಲಿಯನ್ನು ಕಾಣಬಹುದು. ಜೀವನಕ್ಕೆ ಸಮಾಧಾನ ಮತ್ತು ಪ್ರಶಾಂತತೆ ಬೇಕು. ಅದನ್ನು ನೀಡುವುದು ನಮ್ಮ ಸುತ್ತಲಿನ ಪರಿಸರ. ಸುವಾಸನೆ ಹೇಗೆ ಆಹ್ಲಾದಕರವೋ ಹಾಗೆ ಸುವಸ್ತು, ಸುಕ್ಷೇತ್ರವೂ ನಮಗೆ ಆನಂದವನ್ನು ನೀಡುವುದು. ಅದು ಮನಸ್ಸನ್ನು ಅರಳಿಸುವಂತಿರಬೇಕು.
(ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)