

Orange Shark : ಇಡೀ ಜಗತ್ತು ಅನೇಕ ಅಚ್ಚರಿಗಳು ಆಗರ ಮತ್ತು ನಿಗೂಢಗಳ ಸಾಗರ. ಈ ಸೃಷ್ಟಿಯಲ್ಲಿ ಇನ್ನೂ ತಿಳಿಯಲಾಗದ ಅದೆಷ್ಟೋ ರಹಸ್ಯಗಳಿವೆ ಮತ್ತು ಭಯಾನಕ ಸಂಗತಿಗಳಿವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಕಣ್ಣುಗಳ ಹುಬ್ಬು ಒಂದು ಕ್ಷಣ ಮೇಲೇರುವುದಂತೂ ಖಚಿತ. ಅದರಲ್ಲೂ ಸಮದ್ರದ ವಿಚಾರಕ್ಕೆ ಬಂದರೆ ಮನುಷ್ಯ ತಿಳಿದಿರುವುದು ಬೊಗಸೆಯಷ್ಟು ಮಾತ್ರ. ಇನ್ನು ತಿಳಿಯಬೇಕಾದ ಸಹಸ್ರಾರು ಸಂಗತಿಗಳಿವೆ.
ನಮ್ಮ ಭೂಮಿ ಶೇ. 30 ರಷ್ಟು ಭೂಪ್ರದೇಶವನ್ನು ಹೊಂದಿದ್ದು, ಉಳಿದ 70 ರಷ್ಟು ಭಾಗ ನೀರಿನಿಂದ ಆವೃತ್ತವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಭೂಮಿಗಿಂತ ಸಾಗರ ಪ್ರಪಂಚ ತುಂಬಾ ದೊಡ್ಡದು. ಹೀಗಾಗಿ ಅಲ್ಲಿ ಕೋಟ್ಯಂತರ ಜೀವಿಗಳು ವಾಸಿಸುತ್ತಿವೆ. ಆದರೆ, ಮನುಷ್ಯನಿಗೆ ಗೊತ್ತಾಗಿರುವುದು ಬೆರಳಣಿಕೆಯಷ್ಟು ಮಾತ್ರ. ವಿಚಿತ್ರ ಪ್ರಾಣಿಗಳನ್ನು ನೋಡಿದಾಗಲೆಲ್ಲ ಮನುಷ್ಯನ ಕುತೂಹಲ ಜಾಸ್ತಿಯಾಗುತ್ತಾ ಹೋಗುತ್ತದೆ. ಸಾಗರದಾಳದಲ್ಲಿ ಏನೇನಿರಬಹುದು ತಿಳಿದುಕೊಳ್ಳಲು ಆಸಕ್ತಿ ಹೆಚ್ಚಾಗುತ್ತದೆ.
ಇದೀಗ ನಿಮ್ಮ ಕುತೂಹಲ ಕೆರಳಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ, ಸಮುದ್ರದಲ್ಲಿರುವ ಅಪರೂಪದ ಜೀವಿಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಹೌದು, ಪ್ರಕಾಶಮಾನವಾದ ಕಿತ್ತಳೆ ಬಣ್ಣವನ್ನು ಹೊಂದಿರುವ ಅಪರೂಪದ ಜಾತಿಯ ಶಾರ್ಕ್ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ. ಈ ಕಿತ್ತಳೆ ಬಣ್ಣದ ಶಾರ್ಕ್ ಕಳೆದ ವರ್ಷ ಕೋಸ್ಟರಿಕಾದ ಟೋರ್ಟುಗುರೊ ರಾಷ್ಟ್ರೀಯ ಉದ್ಯಾನವನದ ಬಳಿ ಪತ್ತೆಯಾಗಿದೆ. ವಿಜ್ಞಾನಿಗಳು ಇತ್ತೀಚೆಗೆ ಈ ಅತ್ಯಂತ ಅಪರೂಪದ ಶಾರ್ಕ್‌ನ ಚಿತ್ರಗಳನ್ನು ಜರ್ನಲ್ ಆಫ್ ಮೆರೈನ್ ಬಯಾಲಜಿಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ತೆಗೆದ ಈ ಚಿತ್ರಗಳನ್ನು ಪ್ಯಾರಿಸಿಮಾ ಡೊಮಸ್ ಡೀ ಎಂಬ ಪ್ರವಾಸಿ ಕಂಪನಿ ಪೋಸ್ಟ್ ಮಾಡಿದೆ. ಕೆಲವು ಮೀನುಗಾರರು ಕಂಪನಿಯು ಆಯೋಜಿಸಿದ್ದ ಮೀನುಗಾರಿಕೆ ಪ್ರವಾಸದಲ್ಲಿದ್ದರು. ಈ ಸಮಯದಲ್ಲಿ, ಈ ಅಪರೂಪದ ಮೀನು ಸಮುದ್ರದಲ್ಲಿ 37 ಮೀಟರ್ ಆಳದಲ್ಲಿ 31.2 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಪತ್ತೆಯಾಗಿದೆ. ಕಂಪನಿಯು ತಾನು ಚಿನ್ನದ ಮೀನನ್ನು ನೋಡಿರುವುದಾಗಿ ಸಮುದ್ರ ತಜ್ಞರಿಗೆ ಆರಂಭದಲ್ಲಿ ತಿಳಿಸಿತು. ಆದರೆ, ಚಿತ್ರಗಳಲ್ಲಿರುವ ಶಾರ್ಕ್ ಅಪರೂಪದ ಜಾತಿ ಎಂದು ವಿಜ್ಞಾನಿಗಳು ನಂತರ ದೃಢಪಡಿಸಿದರು.
ಅಂದಹಾಗೆ, ಶಾರ್ಕ್‌ನ ಈ ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಹಿಂದೆ ಎರಡು ರೀತಿಯ ಆನುವಂಶಿಕ ರೂಪಾಂತರಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅವುಗಳೆಂದರೆ, ಒಂದು ಆಲ್ಬಿನಿಸಂ ಮತ್ತು ಇನ್ನೊಂದು ಕ್ಸಾಂಥಿಸಮ್. ಇದು ಮೆಲನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರಾಣಿ ಸಾಮ್ರಾಜ್ಯದಲ್ಲಿ ಕ್ಸಾಂಥಿಸಮ್ ಬಹಳ ಅಪರೂಪ. ಇದನ್ನು ಈ ಹಿಂದೆ ಕೆಲವು ಮೀನುಗಳು, ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ ಗಮನಿಸಲಾಗಿದೆ. ಕೆರಿಬಿಯನ್ ಸಮುದ್ರದಲ್ಲಿ ಕಾರ್ಟಿಲ್ಯಾಜಿನಸ್ ಮೀನಿನಲ್ಲಿ ಕಂಡುಬರುವ ಕ್ಸಾಂಥಿಸಮ್‌ನ ಮೊದಲ ಪ್ರಕರಣ ಇದು ಎಂದಿದ್ದಾರೆ.
ಈ ಹೊಸ ಶಾರ್ಕ್‌ನ ಆವಿಷ್ಕಾರವು ಸ್ಥಳೀಯ ಶಾರ್ಕ್‌ಗಳ ಆನುವಂಶಿಕ ವೈವಿಧ್ಯತೆಯ ವಿಶಾಲ ಅಧ್ಯಯನಕ್ಕೆ ಕಾರಣವಾಗಬಹುದು ಎಂದು ಸಂಶೋಧಕರು ನಂಬಿದ್ದಾರೆ. ಆದರೆ, ಹೊಸ ಜಾತಿಯ ಗಾಢ ಬಣ್ಣವು ಪರಭಕ್ಷಕಗಳಿಗೆ ಅದನ್ನು ಗುರುತಿಸುವುದನ್ನು ಸುಲಭಗೊಳಿಸುತ್ತದೆ, ಇದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)