

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಬಂದ್ ಇಲ್ಲ. ಬೆಂಗಳೂರಿನಲ್ಲಿ ಮಾತ್ರ ಜ.31ರವರೆಗೆ ಬಂದ್ ಮುಂದುವರಿಯಲಿದ್ದು, ಸೋಂಕಿನ ಪ್ರಕರಣಗಳು ಹೆಚ್ಚಿರುವ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕರೊನಾ ವೇಳೆ ಶಾಲೆಗಳ ಪರಿಸ್ಥಿತಿ-ಅವಲೋಕಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬುಧವಾರ ಜಿಲ್ಲಾಧಿಕಾರಿಗಳ ಜತೆಗೆ ವಿಡಿಯೋ ಸಂವಾದ ನಡೆಸಿದರು. ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತೀರ ಕಡಿಮೆ ಇದೆ. 1 ಮತ್ತು 2ನೇ ಅಲೆಯಂತೆ ಆತಂಕಪಡುವ ಅಗತ್ಯವಿಲ್ಲ. ತೀವ್ರತೆ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಅಪಾಯ ಕಡಿಮೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಸೋಂಕು ಬಾಧಿಸುವ ಪ್ರಮಾಣ ಸಹ ಕಡಿಮೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸುವ ಅಗತ್ಯತೆ ಕಂಡುಬಂದಿಲ್ಲ. ಪಾಸಿಟಿವಿಟಿ ದರ ಶೇ.5 ಬಂದಲ್ಲಿ ಮಾತ್ರ ಆಯಾ ತಾಲೂಕಿನಲ್ಲಿರುವ ಶಾಲೆಗಳಿಗೆ ರಜೆ ನೀಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎರಡು ಅಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡದಿರಲು ನಿರ್ಧಾರ ಮಾಡಲಾಗಿದೆ. ಬಂದ್ ಆಗುವ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಗಮ, ಚಂದನ ವಾಹಿನಿ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದ ನಾಗೇಶ್, ರಾಜ್ಯದ ಯಾವುದೇ ಭಾಗದಲ್ಲಿ ಮಗು ಕರೊನಾ ಸೋಂಕಿಗೆ ಒಳಗಾದಲ್ಲಿ, ಆ ಮಾಹಿತಿಯನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಸೂಚಿಸಿದರು. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತ ಆರ್.ವಿಶಾಲ್, ಪಿಯು ಇಲಾಖೆ ನಿರ್ದೇಶಕಿ ಆರ್.ಸ್ನೇಹಲ್ ಇತರರು ಇದ್ದರು.
ಬೆಂಗಳೂರಿನಲ್ಲಷ್ಟೇ 31ರವರೆಗೆ ಬಂದ್:: ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಜ.18ರವರೆಗೆ ಶಾಲೆಗಳನ್ನು ಬಂದ್ ಮಾಡಲು ಸೂಚಿಸಿತ್ತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಜ.18ರ ಬದಲಾಗಿ ಜ.31ರವರೆಗೆ ಬಂದ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಉಳಿದ ತರಗತಿಗಳನ್ನು ಸುರಕ್ಷಿತ ಕ್ರಮ ಅನುಸರಿಸಿ ನಡೆಸುವಂತೆ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರ ಸಂಖ್ಯೆ 4 ಕೋಟಿ ಗಡಿ (4.02 ಕೋಟಿ) ದಾಟಿದ್ದು, ಈವರೆಗೆ 5.03 ಕೋಟಿ ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಸದ್ಯ 7 ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬುಧವಾರ 4.04 ಲಕ್ಷ ಡೋಸ್ಗಳಷ್ಟು ಲಸಿಕೆಯನ್ನು ರಾಜ್ಯದಲ್ಲಿ ವಿತರಿಸಲಾಗಿದೆ. 15ರಿಂದ 17 ವರ್ಷದವರಲ್ಲಿ 31. 75 ಲಕ್ಷ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 17.64 ಲಕ್ಷ ಮಂದಿ ಮೊದಲ ಡೋಸ್ ನೀಡಲಾಗಿದೆ. 1.10 ಲಕ್ಷ ಆರೋಗ್ಯ ಕಾರ್ಯಕರ್ತರು, 39 ಸಾವಿರ ಮುಂಚೂಣಿ ಯೋಧರು ಹಾಗೂ 60 ವರ್ಷಗಳು ಮೇಲ್ಪಟ್ಟ 27,108 ಮಂದಿ ಮುನ್ನೆಚ್ಚರಿಕಾ ಡೋಸ್ ಪಡೆದಿಕೊಂಡಿದ್ದಾರೆ.
ಪದೇಪದೆ ಲಾಕ್ಡೌನ್ ಅನ್ನದಿರಿ. ಈ ಮಾತಿನಿಂದ ಅನೇಕ ಜನ ಆತಂಕಗೊಳ್ಳುತ್ತಾರೆ. ಜೀವನವೂ ಮುಖ್ಯ. ಕರೊನಾ ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ. | ಡಾ.ಸಿ.ಎನ್. ಅಶ್ವತ್ಥನಾರಾಯಣ ಸಚಿವ ಕೆಲವೆಡೆ ಶಾಲೆ ಬಂದ್
ಬಾಗಲಕೋಟೆ: ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದಿಂದ ಜ.14 ರಂದು ಆಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಸಭೆ ಬಳಿಕ ಸ್ವಾಮೀಜಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಧಾರ್ವಿುಕ ಕಾರ್ಯಕ್ರಮಗಳನ್ನು ನಿಷೇಧ ಮಾಡಿದೆ. ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 2 ಲಕ್ಷ ಜನ ಸೇರುವುದರಿಂದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿಗದಿತ ಸಮಾರಂಭ ಮುಂದೂಡಲಾಗಿದೆ ಎಂದರು.