

ಬೆಂಗಳೂರು: ರಾಜ್ಯದಲ್ಲಿ ಇನ್ನೂ ನಿಯಂತ್ರಣಕ್ಕೆ ಸಿಗದೆ ವ್ಯಾಪಿಸುತ್ತಿರುವ ಕರೊನಾ ಸೋಂಕು ಸರ್ಕಾರಕ್ಕೆ ಮಾತ್ರವಲ್ಲದೆ ಸಾರ್ವಜನಿಕರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಇಂದು 21 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಕರೊನಾ ಆತಂಕವನ್ನು ಹೆಚ್ಚಾಗಿಸಿದೆ.
ಕಳೆದ 24 ಗಂಟೆಗಳ ಇತ್ತೀಚಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಹೊಸದಾಗಿ 21,390 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 15,617 ಪ್ರಕರಣಗಳು ಪತ್ತೆಯಾಗಿವೆ. ಇನ್ನೊಂದೆಡೆ ಇಂದು ಒಟ್ಟು ಹತ್ತು ಮಂದಿ ಸೋಂಕಿತರು ಮೃತಪಟ್ಟಿದ್ದು, ಅವರಲ್ಲಿ 6 ಪ್ರಕರಣ ಬೆಂಗಳೂರಿನದ್ದು.
ಇನ್ನೂ ಚಿಂತೆಗೀಡು ಮಾಡಿರುವ ವಿಷಯ ಎಂದರೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೆ ಸಮೀಪಿಸಿದೆ. ಮಾತ್ರವಲ್ಲ, ಪಾಸಿಟಿವಿಟಿ ಪ್ರಮಾಣವೂ ಗಣನೀಯವಾಗಿ ಏರಿದೆ. ರಾಜ್ಯದಲ್ಲಿ ಸದ್ಯ 93,009 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ ಬೆಂಗಳೂರಿನಲ್ಲಿ 73 ಸಾವಿರ ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಪಾಸಿಟಿವಿಟಿ ಪ್ರಮಾಣ ಶೇ. 10.96ಕ್ಕೆ ತಲುಪಿದೆ.