

ನವದೆಹಲಿ: ಆರ್ಥಿಕ ದುರ್ಬಲ ವರ್ಗಗಳ ಮಕ್ಕಳನ್ನು ಶಿಕ್ಷಣ ಹಕ್ಕಿನ ಕಾನೂನು (ಆರ್ಟಿಇ) ಅನ್ವಯ ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳದೆ (ವಿನಾಯಿತಿಯ ಲಾಭಪಡೆದು) ದೇಶದಾದ್ಯಂತ ಅಲ್ಪಸಂಖ್ಯಾತ ಮಾನ್ಯತೆಯ ಶಾಲೆಗಳು ವಾರ್ಷಿಕ ಸಾವಿರಾರು ಕೋಟಿ ರೂಪಾಯಿಯನ್ನು ಉಳಿಸುತ್ತಿವೆ.ಈ ಪೈಕಿ ಕ್ರೖೆಸ್ತ ಸಂಘ-ಸಂಸ್ಥೆಗಳ 12,904 ಶಾಲೆಗಳಿದ್ದು, ಉಳಿಸುವ ಹಣದ ವಾರ್ಷಿಕ ಮೊತ್ತ ಸುಮಾರು 2,500 ಕೋಟಿ ರೂಪಾಯಿ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಅಂದಾಜು ಮಾಡಿದೆ. ಈ ಅಂದಾಜನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಕೂಡ ಆರ್ಟಿಇ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಆಯೋಗ ಚಿಂತನೆ ನಡೆಸಿದೆ.
ಕಡ್ಡಾಯ: ಎಲ್ಲ ಅನುದಾನರಹಿತ ಶಾಲೆಗಳು ಪ್ರಾಥಮಿಕ ಹಂತದಲ್ಲ ಬಡ ಮಕ್ಕಳಿಗೆ ಪ್ರವೇಶ ನೀಡಬೇಕೆಂದು ಆರ್ಟಿಇ ಕಡ್ಡಾಯಗೊಳಿಸಿದೆ. ಆದರೆ ಅಲ್ಪಸಂಖ್ಯಾತ ಮಾನ್ಯತೆಯನ್ನು ಮುಂದಿಟ್ಟುಕೊಂಡು ಕ್ರೖೆಸ್ತ ಶಾಲೆಗಳು ದುರ್ಬಲ ವರ್ಗಗಳ ಮಕ್ಕಳನ್ನು ದಾಖಲು ಮಾಡಿಕೊಳ್ಳುವುದರಿಂದ ನುಣುಚಿಕೊಳ್ಳುತ್ತಿವೆ.
ವೆಚ್ಚದ ಅಧ್ಯಯನ: 2017-18ರಲ್ಲಿ ಭಾರತದ ಪ್ರತಿ ಕುಟುಂಬ ಶಿಕ್ಷಣಕ್ಕೆ ವೆಚ್ಚ ಮಾಡುವ ಹಣವನ್ನು ಆಯೋಗ ಲೆಕ್ಕ ಹಾಕಿದೆ. ಅದರ ವರದಿಯಂತೆ, ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ಸಾಮಾನ್ಯ ಶಿಕ್ಷಣ ಪಡೆಯುವ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ಸರಾಸರಿ 18,267 ರೂಪಾಯಿ ವೆಚ್ಚವಾಗುತ್ತದೆ. 12,904 ಕ್ರೖೆಸ್ತ ಅಲ್ಪಸಂಖ್ಯಾತ ಶಾಲೆಗಳಲ್ಲಿ 54,86,884 ಮಕ್ಕಳು ಕಲಿಯುತ್ತಿದ್ದಾರೆ. ಅಂದರೆ ಈ ಶಾಲೆಗಳು 10,022.89 ಕೋಟಿ ರೂಪಾಯಿ ಸಂಪಾದಿಸುತ್ತವೆ. ಶೇಕಡ 25 ಸೀಟ್ಗಳನ್ನು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಬೇಕೆಂಬ ಆರ್ಟಿಇ ನಿಯಮದಿಂದ ವಿನಾಯಿತಿ ಇರುವುದರಿಂದ ಶೇಕಡ 25ರಷ್ಟು ಮಕ್ಕಳ ವೆಚ್ಚಕ್ಕೆ ಸಮಾನವಾದ ಹಣವನ್ನು ಅವು ಉಳಿತಾಯ ಮಾಡುತ್ತವೆ. ಅದು 2,505 ಕೋಟಿ ರೂ. ಆಗುತ್ತದೆ ಎನ್ನುವುದು ಆಯೋಗದ ಲೆಕ್ಕಾಚಾರ.