ಸ್ಕೂಲ್ ವ್ಯಾನ್ ಅಪಘಾತ; ಇಬ್ಬರಿಗೆ ಗಾಯ

van
Published on

ಬೆಂಗಳೂರು: ಖಾಸಗಿ ಶಾಲಾ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಚಾಲಕ ಮತ್ತು 9 ವರ್ಷದ ಬಾಲಕಿ ಗಾಯಗೊಂಡಿದ್ದಾರೆ.

ಪದ್ಮನಾಭನಗರದ ಮೌಂಟ್ ಕಾರ್ಮೆಲ್ ಶಾಲೆಯ ಓಮಿನಿ ವ್ಯಾನ್ ಚಾಲಕ ಕೃಷ್ಣಮೂರ್ತಿ (59) ಮತ್ತು ವಿದ್ಯಾರ್ಥಿನಿ ರುಶಿಕ್ ರಂಗನಾಥ್ (9) ಗಾಯಗೊಂಡವರು. ಇಬ್ಬರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಹೋಗಿದ್ದು, ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ ನಾಲ್ವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 9.15ರಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಕಾಮಾಕ್ಯ ಕಡೆಯಿಂದ ಪದ್ಮನಾಭನಗರ ಕಡೆಗೆ ಬರುತ್ತಿದ್ದ ಶಾಲಾ ವಾಹನದ ಚಾಲಕ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಸಿಗ್ನಲ್ ಜಂಪ್ ಮಾಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಕಡೆಯಿಂದ ಬರುತ್ತಿದ್ದ ಇನೋವಾ ಕಾರಿಗೆ ಶಾಲಾ ವಾಹನ ಗುದ್ದಿ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಶಾಲಾ ವಾಹನ ಉರುಳಿದೆ.

ಸ್ಥಳೀಯರು ಸಹಾಯಕ್ಕೆ ದೌಡಾಯಿಸಿ ವಾಹನದಲ್ಲಿ ಇದ್ದ ಮಕ್ಕಳು ಹಾಗೂ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಗಾಯಗೊಂಡಿದ್ದ ಕೃಷ್ಣಮೂರ್ತಿ ಮತ್ತು ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಶಾಲಾ ವಾಹನ ಅತಿವೇಗವಾಗಿ ಚಲಾಯಿಸಿ ಸಿಗ್ನಲ್ ಜಂಪ್ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇನೋವಾ ಕಾರು ಚಾಲಕ ನೀಡಿದ ದೂರಿನ ಮೇರೆಗೆ ಶಾಲಾ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬನಶಂಕರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net