

ಬೆಂಗಳೂರು: ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರಿಗೆ ಯಾವುದೇ ಡ್ರೆಸ್ಕೋಡ್ ಇಲ್ಲ. ಇದನ್ನು ಜಾರಿಗೊಳಿಸುವ ಬಗ್ಗೆ ಸೂಕ್ತವಾದ ಚರ್ಚೆ ನಡೆಸಿದ ಬಳಿಕವಷ್ಟೇ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಖಂಡನೆ: ನಗರದಲ್ಲಿ ಜೈನ ಸಮುದಾಯದವರ ಪ್ರತಿಭಟನೆ
ವಿಧಾನ ಪರಿಷತ್ನ ಅಧಿವೇಶನದ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ನ ಮಂಜುನಾಥ್ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾ ಶಿಕ್ಷಕರ ಡ್ರೆಸ್ ಬಗ್ಗೆ ರಾಜ್ಯದಲ್ಲಿ ನಿಯಮವಿಲ್ಲ. ಡ್ರೆಸ್ಕೋಡ್ ಒಳ್ಳೆಯದು ಎನ್ನುವುದಾದರೆ ಈ ಕುರಿತು ಸಮಗ್ರವಾಗಿ ಚರ್ಚಿಸಿದ ಬಳಿಕ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಡ್ರೆಸ್ಕೋಡ್ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಯಾವುದೋ ಒಂದು ಪ್ರಕರಣವನ್ನ ಗುರಿಯಾಗಿಟ್ಟುಕೊಂಡು ಜಾರಿಗೆ ತರಲು ಆಗಲ್ಲ. ಆತುರಾತುರವಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ ವಿಭಜಕ ದಾಟುವಾಗಿಲ್ಲ ಸುರಕ್ಷತೆ, ಜೀವ ಭಯದಲ್ಲೇ ವಾಹನ ಸವಾರರ ಸಂಚಾರ, ತಿರುವಿನಲ್ಲಿ ಇಲ್ಲ ರಕ್ಷಣಾ ಕವಚ
ಇನ್ನು ಶಿಕ್ಷಕರ ನೇಮಕಾತಿ ಕುರಿತು ಮಾತನಾಡಿದ ಅವರು, ನ್ಯಾಯಾಲಯದ ತಡೆಯಿರುವ ಕಾರಣ ನೇಮಕಾತಿ ಪತ್ರವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಈ ಕುರಿತು ಕಾನೂನು ತಜ್ಞರ ಈ ಕುರಿತು ಚರ್ಚೆಯನ್ನು ನಡೆಸಲಾಗಿದೆ, ಶೀಘ್ರವೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲಾಗುವುದು. ಜತೆಗೆ 900ಕ್ಕೂ ಹೆಚ್ಚು ವಿಶೇಷ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳುವುದರ ಜತೆಗೆ 306 ಸರ್ಕಾರಿ ಪ್ರೌಢ ಶಾಲೆಗಳ ಮೇಲ್ದರ್ಜೆಗೆ ಏರಿಸಿಲಾಗುವುದು ಎಂದು ಹೇಳಿದ್ದಾರೆ.
ಆರ್ಥಿಕ ಇಲಾಖೆಯು 2015ಕ್ಕಿಂತ ಮುಂಚೆಯ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದೆ. ಅನುದಾನಿತ ಪ್ರೌಢಶಾಲೆಗಳಲ್ಲಿ ಪ್ರಸ್ತುತ 4,783 ಖಾಲಿ ಹುದ್ದೆಗಳಿದ್ದು, 3,794 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.(ಏಜೆನ್ಸೀಸ್)