More

    ರಸ್ತೆ ವಿಭಜಕ ದಾಟುವಾಗಿಲ್ಲ ಸುರಕ್ಷತೆ, ಜೀವ ಭಯದಲ್ಲೇ ವಾಹನ ಸವಾರರ ಸಂಚಾರ, ತಿರುವಿನಲ್ಲಿ ಇಲ್ಲ ರಕ್ಷಣಾ ಕವಚ

    ಸಿಂಧನೂರು: ನಗರದ ಗಂಗಾವತಿ, ರಾಯಚೂರು ಹಾಗೂ ಕುಷ್ಟಗಿ ಸಂಪರ್ಕ ಮಾರ್ಗದಲ್ಲಿ ರಸ್ತೆ ವಿಭಜಕ ದಾಟುವಾಗ ವಾಹನ ಸವಾರರು ಜೀವ ಭಯಪಡುವಂತಾಗಿದೆ. ವಿಭಜಕದ ತಿರುವಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿರುವುದು ಇದಕ್ಕೆ ಪ್ರಮುಖ ಕಾರಣ.

    ನಗರ ವ್ಯಾಪ್ತಿಯಲ್ಲಿನ ಹೆದ್ದಾರಿ ಅಭಿವೃದ್ಧಿಗೊಂಡಿದ್ದರೂ ರಸ್ತೆ ವಿಭಜಕಗಳು ಪ್ರಾಣಕ್ಕೆ ಸಂಚಕಾರ ತರುತ್ತಿವೆ. ವಿಭಜಕಗಳ ನಿರ್ಮಾಣ ಅವೈಜ್ಞಾನಿಕವಾಗಿರುವುದು ಇದಕ್ಕೆ ಪ್ರಮುಖ ಕಾರಣ. ಕುಷ್ಟಗಿ ಸಂಪರ್ಕ ರಸ್ತೆಯಲ್ಲಿ ಸರ್ಕಾರಿ ಮಹಾವಿದ್ಯಾಲಯ, ಎಪಿಎಂಸಿ, ಬಸವ ನಗರ, ಬಪ್ಪೂರು ಕ್ರಾಸ್, ಬಸವ ವೃತ್ತ, ಅಂಬಾದೇವಿ ದೇವಸ್ಥಾನ ವೃತ್ತ, ಬಸ್ ನಿಲ್ದಾಣ ಕ್ರಾಸ್, ಗಾಂಧಿ ವೃತ್ತದಲ್ಲಿ ವಿಭಜಕಗಳಿವೆ.

    ಇದನ್ನೂ ಓದಿರಿ

    ರಾಯಚೂರು ಮಾರ್ಗದಲ್ಲಿ ತಹಸಿಲ್ ಕಚೇರಿ, ಹಳೆಯ ಶಾಸಕರ ಕಚೇರಿ, ಸಾರ್ವಜನಿಕ ಅಸ್ಪತ್ರೆ, ಪೊಲೀಸ್ ಠಾಣೆ ಮುಂಭಾಗ, ಕನಕದಾಸ ವೃತ್ತ, ಅಶೋಕ ಭವನ, ನಗರಸಭೆ ಕಚೇರಿ, ಜೆಸ್ಕಾಂ ಕಚೇರಿ, ನೀರಾವರಿ ಇಲಾಖೆ ಹಾಗೂ ಗಂಗಾವತಿ ಮಾರ್ಗದಲ್ಲಿ ಪ್ರವಾಸಿ ಮಂದಿರ, ಪಾಟೀಲ್ ಶಿಕ್ಷಣ ಸಂಸ್ಥೆ, ವಿಕಾಸ ಬ್ಯಾಂಕ್, ಸುಕೋ ಬ್ಯಾಂಕ್, ಎಸ್‌ಬಿಐ, ಹೋಲಿ ಫ್ಯಾಮಿಲಿ ಶಾಲೆ ಸೇರಿ 50ಕ್ಕೂ ಹೆಚ್ಚು ಕಡೆ ವಿಭಜಕಗಳಿವೆ.

    ಕಳೆದ ಮೂರ‌್ನಾಲ್ಕು ತಿಂಗಳಲ್ಲಿ ಬಸವ ವೃತ್ತದಿಂದ ಬಸ್ ನಿಲ್ದಾಣದ ತಿರುವಿನ ವಿಭಜಕಗಳಲ್ಲಿ ಐದಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಸವ ವೃತ್ತದ ಬಳಿ ಬೈಕ್‌ನಲ್ಲಿ ವಿಭಜಕ ದಾಟುವಾಗ ರುದ್ರಗೌಡ ಪಾಟೀಲ್ ಗುಂಜಳ್ಳಿ ಎಂಬುವವರ ತಲೆ ಮೇಲೆ ಲಾರಿ ಹರಿದಿದೆ.

    ಅವಸರವೂ ಕಾರಣ

    ರಸ್ತೆ ವಿಭಜಕಗಳ ಬಳಿ ವೇಗ ನಿಯಂತ್ರಕಗಳನ್ನು ಅಳವಡಿಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ವೇಗ ನಿಯಂತ್ರಕಗಳ ಜತೆಗೆ ಬೇರೆ ರೀತಿಯ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಟ್ರಾಫಿಕ್ ಪೊಲೀಸ್ ಠಾಣೆ ಇದ್ದರೂ ಅಪಘಾತಗಳ ನಿಯಂತ್ರಣ ಸಾಧ್ಯವಾಗಿಲ್ಲ. ವಾಹನ ಸವಾರರು ಅವಸರದಿಂದ ವಿಭಜಕ ದಾಟಲು ಮುಂದಾಗುವುದು ಕೂಡ ಅಪಘಾತಗಳಿಗೆ ಕಾರಣವಾಗಿದೆ.

    ರಾಯಚೂರು ಮಾರ್ಗದ ಹೆದ್ದಾರಿಯಲ್ಲಿ ವೇಗ ನಿಯಂತ್ರಕಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ಸುಗಮ ಸಂಚಾರ ದೃಷ್ಟಿಯಿಂದ ಅಲ್ಲಲ್ಲಿ ನೆಲಮಟ್ಟದಲ್ಲಿ ವೇಗ ನಿಯಂತ್ರಕ ನಿರ್ಮಾಣ ಅವಶ್ಯವಿದ್ದು, ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವುದು. ಕೋರ್ಟ್ ಸರ್ಕಲ್‌ದಿಂದ ಶ್ರೀಪುರಂ ಜಕ್ಷನ್‌ನವರೆಗೆ ಕೆಆರ್‌ಡಿಸಿಎಲ್‌ನವರಿಗೆ ಉಸ್ತುವಾರಿ ವಹಿಸಲಾಗಿದೆ. ಕುಷ್ಟಗಿ ಹೆದ್ದಾರಿಯಲ್ಲಿ ವೇಗ ನಿಯಂತ್ರಕಗಳ ನಿರ್ಮಾಣಕ್ಕೆ ಸೂಚಿಸಲಾಗುವುದು.
    ವಿಜಯಕುಮಾರ ಪಾಟೀಲ್
    ಇಇ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ವಿಜಯಪುರ

    ಸಿಂಧನೂರು ನಗರ ವ್ಯಾಪ್ತಿಯ ಗಂಗಾವತಿ, ಕುಷ್ಟಗಿ ಹಾಗೂ ರಾಯಚೂರು ಮಾರ್ಗದಲ್ಲಿ ಡಿವೈಡರ್ ಮಧ್ಯದ ತಿರುವಿನಲ್ಲಿ ಯಾವುದೇ ರೀತಿಯಲ್ಲಿ ಸಂಚಾರ ಸುಗಮವಾಗಿಲ್ಲ. ಬಸ್ ನಿಲ್ದಾಣದ ತಿರುವಿನಲ್ಲಿ ಹೆಚ್ಚಿನ ಅಪಾಯ ಇದೆ. ಐದಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಡಿವೈಡರ್ ತಿರುವಿನಲ್ಲಿ ಹಂಪ್ಸ್ ನಿರ್ಮಿಸಬೇಕು.
    ಎಸ್.ದೇವೆಂದ್ರಗೌಡ
    ಕಾರ್ಯದರ್ಶಿ, ಸಮುದಾಯ ಸಂಘಟನೆ, ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts