More

    ಪೊಲೀಸ್ ಸೂಚನೆ ಲೆಕ್ಕಕ್ಕಿಲ್ಲ

    -ಸಂದೀಪ್ ಸಾಲ್ಯಾನ್ ಬಂಟ್ವಾಳ

    ಬಿ.ಸಿ.ರೋಡ್‌ನಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಸಂಚಾರಿ ಪೊಲೀಸರು ಅನೇಕ ಪರಿಹಾರ ಕ್ರಮ ಕೈಗೊಂಡರೂ ಕೆಲವೊಂದು ವಾಹನ ಚಾಲಕರ ಅಸಹಕಾರದಿಂದ ಪೊಲೀಸರು ಕೈಗೊಂಡ ಪ್ರಯತ್ನ ವಿಫಲವಾಗುತ್ತಿದೆ. ಇದಕ್ಕೊಂದು ಉದಾಹರಣೆ ಬಿ.ಸಿ.ರೋಡ್‌ನ ಸರ್ವಿಸ್ ರಸ್ತೆಯಲ್ಲಿರುವ ಸೂಚನಾ ಫಲಕ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಹಾಕಲಾಗಿರುವ ಈ ಸೂಚನೆ ಕೇವಲ ಬ್ಯಾರಿಕೇಡ್‌ಗೆ ಮಾತ್ರ ಸೀಮಿತವಾದಂತಿದೆ.

    ಬಿ.ಸಿ.ರೋಡ್-ಮಂಗಳೂರಿಗೆ ಹೋಗುವ ಖಾಸಗಿ ಬಸ್‌ಗಳ ನಿಲುಗಡೆಗೆ ಇಲ್ಲಿ ಪತ್ಯೇಕ ತಂಗುದಾಣವಿಲ್ಲ. ಸರ್ವಿಸ್ ರಸ್ತೆಯಲ್ಲಿಯೇ ಬಸ್‌ಗಳು ಜನರನ್ನು ಇಳಿಸಿ-ಹತ್ತಿಸಿ ಮುಂದೆ ಹೋಗುತ್ತದೆ. ವಿಶಾಲ ಹಾಗೂ ಸುಸಜ್ಜಿತವಾದ ಪ್ರತ್ಯೇಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವಿದ್ದರೂ ಬಸ್ಸುಗಳು ಇಲ್ಲಿಯೇ ಜನರನ್ನು ಪಿಕ್‌ಅಪ್ ಮಾಡಿಕೊಳ್ಳುತ್ತದೆ. ಇಲ್ಲಿ ಪ್ರಯಾಣಿಕರು ನಿಲ್ಲಲು ವ್ಯವಸ್ಥೆ ಇಲ್ಲ. ಅಂಗಡಿ, ಬಾಗಿಲು, ರಸ್ತೆಯಲ್ಲಿಯೇ ನಿಂತು ಬಸ್ ಕಾಯಬೇಕು. ಪ್ರತಿದಿನ ಪೀಕ್‌ಅವರ್‌ನಲ್ಲಿ ಜನಸಂದಣಿಯಿರುತ್ತದೆ. ಪ್ರಯಾಣಿಕರನ್ನು ತುಂಬಿಸುವ ಧಾವಂತದಲ್ಲಿ ಖಾಸಗಿ, ಸರ್ಕಾರಿ ಎನ್ನದೆ ಬಸ್‌ಗಳು ಪೈಪೋಟಿಯಲ್ಲಿ ನುಗ್ಗಿ ಬರುತ್ತವೆ. ಬಸ್‌ಗಳ ಹಿಂದೆ ಮುಂದೆ ಸಿಗುವ ಸ್ಥಳಾವಕಾಶದಲ್ಲಿ ಆಟೋ, ಕಾರುಗಳು ನಿಂತು ಜನರನ್ನು ಇಳಿಸಿಕೊಳ್ಳುತ್ತವೆ. ನಾಲ್ಕೈದು ಬಸ್‌ಗಳು ಏಕಕಾಲದಲ್ಲಿ ಬಂದು ನಿಂತರೆ ಸಾಕು, ರಸ್ತೆಯಲ್ಲಿ ಟ್ರಾಫಿಕ್‌ಜಾಂ ಉಂಟಾಗುತ್ತದೆ. ಹಿಂಭಾಗದಲ್ಲಿರುವ ವಾಹನಗಳು ಮುಂದೆ ಚಲಿಸಲು ಹಾರ್ನ್ ಹಾಕುತ್ತ ಕಾಯಬೇಕಾಗುತ್ತದೆ. ಬಸ್‌ನಿಂದ ಪ್ರಯಾಣಿಕರು ಇಳಿದು ತಂಗುದಾಣದಲ್ಲಿನ ಪ್ರಯಾಣಿಕರು ಹತ್ತದೆ ಬಸ್ ಮುಂದೆ ಸಂಚರಿಸುವುದಿಲ್ಲ.

    ಸೂಚನಾ ಫಲಕಕ್ಕೆ ಬೆಲೆಯಿಲ್ಲ

    ಸರ್ವಿಸ್ ರಸ್ತೆ ಆರಂಭವಾದಂದಿನಿಂದ ಹುಟ್ಟಿಕೊಂಡಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಂಚಾರಿ ಪೊಲೀಸರು ಇಲ್ಲೊಂದು ಬ್ಯಾರಿಕೇಡ್ ಇಟ್ಟು ಅದರಲ್ಲಿ ಬಸ್ ನಿಲುಗಡೆಗೆ ಮಾತ್ರ ಅವಕಾಶ ಎಂದು ಬರೆಸಿದ್ದಾರೆ. ಆದರೆ ಪೊಲೀಸರ ಈ ಬರಹಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈ ಹಿಂದಿನಂತೆ ಬಸ್‌ಗಳ ಜತೆ ಖಾಸಗಿ ವಾಹನಗಳು, ಆಟೋರಿಕ್ಷಾಗಳು ಅದೇ ಸ್ಥಳದಲ್ಲಿ ನಿಂತು ಜನರನ್ನು ಇಳಿಸಿಕೊಳ್ಳುತ್ತ ಸರ್ವಿಸ್ ರಸ್ತೆಯ ಟ್ರಾಫಿಕ್‌ಜಾಂಗೆ ಕೊಡುಗೆಯನ್ನು ನೀಡುತ್ತಾರೆ. ಸೂಚನಾ ಫಲಕವನ್ನು ಓದಿಯೂ ಅದರ ಮುಂಭಾಗದಲ್ಲೇ ವಾಹನ ನಿಲ್ಲಿಸುವ ಮನೋಸ್ಥಿತಿಯಿಂದ ವಾಹನಗಳ ಸುಗಮ ಸಂಚಾರಕ್ಕಾಗಿ ಪೊಲೀಸರು ಮಾಡುವ ಪ್ರಯತ್ನ ವಿಫಲವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.

    ಬಿ.ಸಿ.ರೋಡ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತೊಂದರೆಯಾಗಬಾರದೆನ್ನುವ ಉದ್ದೇಶದಿಂದ ಕೆಲವೊಂದು ಆಯ್ದ ಜಾಗಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಸೂಚನಾ ಫಲಕವನ್ನು ಪೊಲೀಸರು ಹಾಕಿದ್ದಾರೆ. ಅಚ್ಚ ಕನ್ನಡದಲ್ಲಿ ಸೂಚನಾ ಫಲಕ ಇದ್ದರೂ, ಅದರ ಮುಂಭಾಗದಲ್ಲೇ ವಾಹನ ನಿಲ್ಲಿಸುವ ದೃಶ್ಯ ಪದೇ ಪದೆ ಕಾಣಸಿಗುತ್ತದೆ.
    -ವೆಂಕಟೇಶ್, ಬಿ.ಸಿ ರೋಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts