More

    ಶ್ರೀದೇವಿಯಾಗಿ ಮಿಂಚಿದ ಮೆಲಿಷಾ

    -ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

    ಕಲೆ ಯಾರೊಬ್ಬರ ಸ್ವತ್ತಲ್ಲ. ಗಂಡು ಕಲೆ ಎಂದೇ ಖ್ಯಾತಿಯೆತ್ತಿದ ಯಕ್ಷಗಾನ ಇಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಸರಿ ಸಮಾನವಾಗಿ ಬೆಳೆದು ನಿಂತಿದೆ. ಜಾತಿ, ಧರ್ಮ, ಮತದ ಎಲ್ಲೆ ಮೀರಿ ಎಲ್ಲರೂ ಯಕ್ಷಗಾನದತ್ತ ಆಕರ್ಷಿತರಾಗಿದ್ದಾರೆ. ಐದಾರು ದಶಕಗಳ ಹಿಂದಿನಿಂದಲೇ ತೆಂಕುತಿಟ್ಟು ಯಕ್ಷಗಾನದಲ್ಲಿ ಖ್ಯಾತ ಪುಂಡುವೇಷಧಾರಿಗಳಾಗಿ ಧಿಗಿಣ ವೀರರೆಂದೇ ಛಾಪುಮೂಡಿಸಿದ್ದ ಕ್ರೈಸ್ತಧರ್ಮದ ಕ್ರಿಶ್ಚಿಯನ್ ಬಾಬು, ನೆಲ್ಯಾಡಿಯ ಜೋಸೆಫ್ ಡಿಸೋಜ ಅವರ ವೇಷಗಳನ್ನು ನೋಡಲೆಂದೇ ಅಸಂಖ್ಯಾತ ಯಕ್ಷಾಭಿಮಾನಿಗಳಿದ್ದ ಕಾಲವಿತ್ತು.

    ಇಂಥದೊಂದು ಜಾತಿ, ಮತ, ಧರ್ಮದ ಚೌಕಟ್ಟನ್ನು ಮೀರಿದ ಕಲಾವಿದರ ಸಾಲಿಗೆ ಪಡುಬೆಟ್ಟುನ ಮನೀಶ್ ಮಸ್ಕರೇನಸ್-ನ್ಯಾನ್ಸಿ ಲಿಝಿ ದಂಪತಿ ಪುತ್ರಿ 5ನೇ ತರಗತಿ ವಿದ್ಯಾರ್ಥಿನಿ ಮೆಲಿಷಾ ಮಸ್ಕರೇನ್ಹಸ್ ಸೇರ್ಪಡೆಯಾಗಿದ್ದಾಳೆ. ಶನಿವಾರ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶಾಲೆಯಲ್ಲಿ ಯಕ್ಷಗಾನಗುರು ಯೋಗೀಶ ಶರ್ಮ ಅಳದಂಗಡಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಜರುಗಿದ ‘ಶಾಂಭವಿ ವಿಜಯ’ ಪ್ರದರ್ಶನದಲ್ಲಿ ಶ್ರೀದೇವಿಯಾಗಿ ಮಿಂಚಿದಳು.

    ಹತ್ತು ದಿನಗಳ ವ್ರತ

    ಶ್ರೀದೇವಿ ಮಹಾತ್ಮೆಯ ಶ್ರೀದೇವಿ ಪಾತ್ರಧಾರಿ ವೃತ್ತಿಪರರು ಸಾತ್ವಿಕ ಆಹಾರ ಪದ್ಧತಿಯ ವ್ರತದಲ್ಲಿರುವುದು ರೂಢಿಯಲ್ಲಿದೆ. ಪಾತ್ರಕ್ಕೂ ವಿಶೇಷ ಭಕ್ತಿಯಲ್ಲಿ ನಡೆದುಕೊಳ್ಳುವ ಸಲುವಾಗಿ ಮೆಲಿಷಾ ಕಾರ್ಯಕ್ರಮದ 10 ದಿನ ಮುಂಚಿತವಾಗಿ ಸಾತ್ವಿಕ ಆಹಾರ ಸೇವನೆ ರೂಢಿಸಿಕೊಂಡಿದ್ದಳು.

    4 ದಶಕದ ನಂತರ ಪಡುಬೆಟ್ಟುವಿನಲ್ಲಿ ನಡೆದ ಮಕ್ಕಳ ಯಕ್ಷಗಾನ ಪ್ರದರ್ಶನ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಅವರೇ ಹುಟ್ಟು ಹಾಕಿದ ಬಾಲಸುಬ್ರಹ್ಮಣ್ಯ ಮಕ್ಕಳ ಮೇಳವನ್ನು ಇದೀಗ ನಮ್ಮ ಪ್ರತಿಷ್ಠಾನದಿಂದ ಉದ್ದೀಪನಗೊಳಿಸಿದ್ದು ಪ್ರಥಮ ತಂಡದಲ್ಲೇ ಈ ಕುವರಿಯ ಮನೋಜ್ಞ ಅಭಿನಯ ತಂಡಕ್ಕೆ ಹೆಮ್ಮೆ ನೀಡಿದೆ.
    -ಗುಡ್ಡಪ್ಪ ಬಲ್ಯ, ಗೌರವಾಧ್ಯಕ್ಷರು
    ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ-ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ, ಪಡುಬೆಟ್ಟು

    ನಮ್ಮ ಹಿರಿಯರ ಕಾಲದಿಂದಲೂ ನಾವು ಯಕ್ಷಗಾನ ಅಭಿಮಾನಿಗಳು. 6 ವರ್ಷದಿಂದಲೇ ಮೆಲಿಷಾ ಯೂಟ್ಯೂಬ್ ಮೂಲಕ ಯಕ್ಷಗಾನ ವೀಕ್ಷಿಸುತ್ತಾ ಯಕ್ಷಗಾನದ ಕಡೆಗೆ ಆಕರ್ಷಿತಳಾಗಿದ್ದಳು. ನಮ್ಮ ಕುಟುಂಬದಲ್ಲಿ, ಧಾರ್ಮಿಕ ಕೇಂದ್ರದಲ್ಲಿ, ಮತ್ತು ನೆರೆಹೊರೆಯಲ್ಲಿ ಯಕ್ಷಗಾನ ಪಾತ್ರ ನಿರ್ವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀದೇವಿ ಪಾತ್ರನಿರ್ವಹಿಸುವ ಮುಂಚಿತವಾಗಿ ನಾವು ಹತ್ತು ದಿನ ಮೆಲಿಷಾ ಮಾಂಸಾಹಾರ ತ್ಯಜಿಸಿದ್ದೆವು.
    -ನ್ಯಾನ್ಸಿ ಲಿಝಿ ಗೌರವ ಶಿಕ್ಷಕಿ (ಮೆಲಿಷಾಳ ತಾಯಿ)
    ಸ.ಹಿ.ಪ್ರ ಶಾಲೆ, ಪಡುಬೆಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts