ಶಾಲಾ ಮಕ್ಕಳ ದಾಖಲಾತಿ ಪ್ರಮಾಣ ಕುಸಿತ

school-children
Published on

ಎನ್.ಎಲ್. ಶಿವಮಾದು

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿನ 2025-26ನೇ ಸಾಲಿನಲ್ಲಿ ದಾಖಲಾತಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗಿದೆ. ಹಿಂದಿನ ವರ್ಷಕ್ಕಿಂತ ಬರೋಬ್ಬರಿ 5.22 ಲಕ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ 2.54 ಲಕ್ಷ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯು ರಾಜ್ಯ್ಯದಲ್ಲಿ 2025-26ನೇ ಸಾಲಿನಲ್ಲಿ ಬೋಧನೆ ಮಾಡುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಹಾಗೂ ಜು.31ರವರೆಗೆ ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳ ದತ್ತಾಂಶವನ್ನು ಪ್ರಕಟಿಸಿದೆ.

2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 1,04,69,944 (1.04 ಕೋಟಿ) ಮಕ್ಕಳು ದಾಖಲಾಗಿದ್ದರು. ಆದರೆ, ಈ ವರ್ಷ ಅದರ ಸಂಖ್ಯೆಯು 99,47,261ಕ್ಕೆ ಇಳಿಕೆಯಾಗಿದೆ. ಅಂದರೆ ಒಟ್ಟು 5,22,433 ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಇಷ್ಟು ದೊಡ್ಡ ಮಟ್ಟದ ಸಂಖ್ಯೆ ಕಡಿತವಾಗಿರಲಿಲ್ಲ. 2023-24ರಲ್ಲಿ 1,05,94,694 ಮಕ್ಕಳು ದಾಖಲಾಗಿದ್ದರು. ಅದಕ್ಕೆ ಹೋಲಿಸಿದಾಗ 2024-25ರಲ್ಲಿ 1,24,750 ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಈ ವರ್ಷ ಐದು ಲಕ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದು ಶಿಕ್ಷಣ ವಲಯದ ಆತಂಕಕ್ಕೆ ಕಾರಣವಾಗಿದೆ.

ಸರ್ಕಾರಿ ಶಾಲೆಯಲ್ಲಿ 2.54 ಲಕ್ಷ ಕುಸಿತ:

2024-25ರಲ್ಲಿ ಸರ್ಕಾರಿ ಶಾಲೆಯಲ್ಲಿ 40.74 ಲಕ್ಷ, ಅನುದಾನಿತ ಶಾಲೆಯಲ್ಲಿ 11.86 ಲಕ್ಷ ಹಾಗೂ ಖಾಸಗಿ ಶಾಲೆಯಲ್ಲಿ 48.36 ಲಕ್ಷ ಮಕ್ಕಳು ನೋಂದಣಿಯಾಗಿದ್ದರು. 2025-26ರಲ್ಲಿ ಸರ್ಕಾರಿ ಶಾಲೆಯಲ್ಲಿ 38.20 ಲಕ್ಷ, ಅನುದಾನಿತ ಶಾಲೆಯಲ್ಲಿ 11.09 ಹಾಗೂ ಖಾಸಗಿ ಶಾಲೆಯಲ್ಲಿ 46.66 ಮಕ್ಕಳು ನೋಂದಣಿಯಾಗಿದ್ದಾರೆ.

ಸರ್ಕಾರಿ ಶಾಲೆಯಲ್ಲಿ 2.54 ಲಕ್ಷ, ಖಾಸಗಿ ಶಾಲೆಗಳಲ್ಲಿ 1.7 ಲಕ್ಷ ಸಂಖ್ಯೆಯ ಮಕ್ಕಳು ಕುಸಿತವಾಗಿದ್ದರೆ, ಅನುದಾನಿತ ಶಾಲೆಯಲ್ಲಿ 77 ಸಾವಿರ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

3 ವರ್ಷದಲ್ಲಿ 4.74 ಲಕ್ಷ ಕುಸಿತ:

ಇನ್ನು ಸರ್ಕಾರಿ ಶಾಲೆಯಲ್ಲಿ 2023-24 ಮತ್ತು 2025-26ರ ಶೈಕ್ಷಣಿಕ ಅವಧಿಯಲ್ಲಿ 7.26 ಲಕ್ಷ ಮಕ್ಕಳು ಕಡಿಮೆಯಾಗಿದ್ದಾರೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಯಲ್ಲಿ ಕೇವಲ 31 ಸಾವಿರ ಮಾತ್ರ ಕಡಿಮೆಯಾಗಿದೆ. 2023-24ಕ್ಕೆ ಹೋಲಿಸಿದರೆ 2024-25ರಲ್ಲಿ 1.39 ಲಕ್ಷ ಹೆಚ್ಚಳವಾಗಿದ್ದರು. ಈ ವರ್ಷ ಖಾಸಗಿ ಶಾಲೆಯಲ್ಲಿಯೂ 1.7 ಲಕ್ಷ ಕುಸಿತವಾಗಿದೆ.

ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆ

ವರ್ಷ ಸರ್ಕಾರಿ ಅನುದಾನಿತ ಖಾಸಗಿ ಒಟ್ಟು

2023-24 42.94 ಲಕ್ಷ 12.31 ಲಕ್ಷ 46.97 1.05 ಕೋಟಿ

2024-25 40.74 ಲಕ್ಷ 11.86 ಲಕ್ಷ 48.36 ಲಕ್ಷ 1.04 ಕೋಟಿ

2025-26 38.20 ಲಕ್ಷ 11.09 ಲಕ್ಷ 46.66 ಲಕ್ಷ 99.47 ಲಕ್ಷ

ಮಕ್ಕಳ ಸಂಖ್ಯೆ ಕುಸಿತಕ್ಕೆ ಕಾರಣವೇನು?

- ದೇಶಾದ್ಯಂತ ಜನನ ಪ್ರಮಾಣ ಕುಸಿತವಾಗುತ್ತಿರುವುದು - ನಿರುದ್ಯೋಗ ಸಮಸ್ಯೆಯಿಂದ ಹೆಚ್ಚಾಗುತ್ತಿರುವ ವಲಸೆ - ಆರ್ಥಿಕ ಅನಿಶ್ಚಿತತೆ ಮತ್ತು ಜೀವನ ನಿರ್ವಹಣೆ ವೆಚ್ಚ ಹೆಚ್ಚಳ - ಮದುವೆ ಮತ್ತು ಮಕ್ಕಳನ್ನು ಪಡೆಯುವ ಅವಧಿಯನ್ನು ಮುಂದೂಡುವುದು - ಒಂದೇ ಮಗು ಸಾಕು ಎನ್ನುವವರ ಪ್ರಮಾಣ ಹೆಚ್ಚಳ - ಒತ್ತಡದ ಜೀವನ, ಬದಲಾದ ಜೀವನಶೈಲಿಯಿಂದ ಲವಂತಿಕೆ ಪ್ರಮಾಣ ಕಡಿಮೆ

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಜತೆಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಒಂದರಿಂದ 12ನೇ ತರಗತಿವರೆಗೆ ಒಂದೇ ಕಡೆ ಶಿಕ್ಷಣ ದೊರೆಯುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಮಾಡಲು ಕ್ರಮ ವಹಿಸಲಾಗುತ್ತಿದೆ. - ಡಾ. ಕೆ.ವಿ. ತ್ರಿಲೋಕ್‌ಚಂದ್ರ, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net