

| ಎನ್.ಎಲ್.ಶಿವಮಾದು ಬೆಂಗಳೂರು
ಬರಪೀಡಿತ ತಾಲೂಕುಗಳಲ್ಲಿರುವ ಮಕ್ಕಳು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆಯು ಮುಂಬರುವ ಏಪ್ರಿಲ್- ಮೇ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡಲು ಇಚ್ಛಿಸಿದೆ. ರಾಜ್ಯದಲ್ಲಿ ಘೋಷಣೆಯಾಗಿರುವ 223 ಬರಪೀಡಿತ ತಾಲೂಕುಗಳಲ್ಲಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ಊಟ ನೀಡಲಾಗುತ್ತದೆ. ಈ ಸಂಬಂಧ ರಾಜ್ಯದ ಎಲ್ಲ ಬಿಇಒ ಮತ್ತು ಡಿಡಿಪಿಐಗಳಿಂದ ಪಿಎಂ ಪೋಷಣ್ ನಿರ್ದೇಶಕರು ಮಾಹಿತಿ ಸಂಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ ವರದಿ ಅನ್ವಯ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರವು ಘೋಷಿಸಿದೆ. ಈ ತಾಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಒಟ್ಟು 41 ದಿನ ಬಿಸಿಯೂಟ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಪ್ರಸ್ತುತ ತರಗತಿವಾರು ದಾಖಲಾತಿ ಹಾಜರಾತಿಯಂತೆ ಬಿಸಿಯೂಟ ಸ್ವೀಕರಿಸಲು ಇಚ್ಛಿಸುವ/ಅಪೇಕ್ಷೆ ಹೊಂದಿರುವ ಮಕ್ಕಳ ಸಂಖ್ಯೆಯನ್ನು ಗುರುತಿಸುವ ಸಂಬಂಧ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಿನ ಸಹಾಯಕ ನಿರ್ದೇಶಕರು ಅಗತ್ಯ ಕ್ರಮ ವಹಿಸಿ ಜಿಲ್ಲಾವಾರು ಮಾಹಿತಿಯನ್ನು ಫೆ.3ರೊಳಗೆ ಕಳುಹಿಸುವಂತೆ ಸೂಚಿಸಲಾಗಿತ್ತು.
ಪಾಲಕರ ಒಪ್ಪಿಗೆ ಪತ್ರ ಕಡ್ಡಾಯ: ಶಾಲಾ ಹಂತದಲ್ಲಿ ತರಗತಿವಾರು ಪ್ರತಿ ವಿದ್ಯಾರ್ಥಿಯಿಂದ ಬಿಸಿಯೂಟವನ್ನು ಸ್ವೀಕರಿಸುವ ಸಲುವಾಗಿ ವಿದ್ಯಾರ್ಥಿ ಮತ್ತು ಪಾಲಕರಿಂದ ಒಪ್ಪಿಗೆ ಪತ್ರವನ್ನು ಶಾಲಾ ಮುಖ್ಯ ಶಿಕ್ಷಕರು ಪಡೆದುಕೊಳ್ಳಬೇಕು. ಒಪ್ಪಿಗೆ ಪತ್ರ ಆಧರಿಸಿ ಶಾಲಾ ಹಂತದಲ್ಲಿ ಬಿಸಿಯೂಟವನ್ನು ಸ್ವೀಕರಿಸುವ ಮಕ್ಕಳ ಸಂಖ್ಯೆಯನ್ನು ತಾಲೂಕು ಮತ್ತು ಜಿಲ್ಲಾವಾರು ಮಾಹಿತಿಯನ್ನು ಇಲಾಖೆಗೆ ತಿಳಿಸಬೇಕು ಎಂಬ ಸೂಚನೆ ನೀಡಲಾಗಿತ್ತು.
2023-24ನೇ ಸಾಲಿನ ಶೈಕ್ಷಣಿಕ ವರ್ಷವು ಏ.10ಕ್ಕೆ ಕೊನೆಗೊಳ್ಳಲಿದೆ. ಅಲ್ಲಿಯವರೆಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಅದಾದ ನಂತರ ಮೇ ಕೊನೇ ವಾರದಲ್ಲಿ ಶಾಲೆಗಳು ಆರಂಭವಾಗಲಿದೆ. ಈ ನಡುವೆ ಬರುವ ದಿನಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಬ್ಬ ಮತ್ತು ಲೋಕಸಭಾ ಚುವಾವಣೆ ದಿನಗಳನ್ನು ಹೊರತುಪಡಿಸಿ ಸದ್ಯ 41 ದಿನಗಳನ್ನು ಅಂದಾಜಿಸಿದೆ.
ಪಠ್ಯಕ್ರಮ ಚೌಕಟ್ಟು ರಚನೆ ಸಿದ್ಧತೆ: ಬೆಂಗಳೂರು: ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಸಮಿತಿಯು ಮುಂಬರುವ 2024-25ನೇ ಸಾಲಿನ ಉನ್ನತ ಶಿಕ್ಷಣದ ಪಠ್ಯಕ್ರಮ ಚೌಕಟ್ಟು ಸಿದ್ಧಪಡಿಸಲು ಮುಂದಾಗಿದೆ. ಸಮಿತಿಯು ಈಗಾಗಲೆ 3 ವರ್ಷದ ಪದವಿಗೆ ಶಿಫಾರಸು ಮಾಡಿದೆ. ಮುಂದಿನ 6 ತಿಂಗಳಲ್ಲಿ 2024-25ನೇ ಪದವಿ ಶೈಕ್ಷಣಿಕ ವರ್ಷ ಆರಂಭವಾಗಲಿರುವ ಕಾರಣ ಅಷ್ಟರೊಳಗೆ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಕ್ರಮ ರಚನೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಪಠ್ಯಕ್ರಮ ಚೌಕಟ್ಟು ರಚನೆ ಕಾರ್ಯ ತುರ್ತಾಗಿ ಮಾಡಬೇಕಿರುವ ಕಾರಣ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಫೆ.9 ಮತ್ತು 10ರಂದು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೊಂದಿಗೆ ರ್ಚಚಿಸಲು ಸಭೆ ನಿಗದಿ ಮಾಡಿದೆ.ಕಡ್ಡಾಯವಾಗಿ 2024-25ನೇ ಸಾಲಿನ ಪಠ್ಯಕ್ರಮ ಚೌಕಟ್ಟು ರಚನೆ ಮಾಡಿಕೊಡುವಂತೆ ರಾಜ್ಯ ಸರ್ಕಾರವು ಸಮಿತಿಗೆ ಸೂಚನೆ ನೀಡಿದೆ. ಈ ಸಂಬಂಧ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಇಂಜಿನಿಯರಿಂಗ್ ಸೇರಿ ಇತರ ವಿಷಯಗಳನ್ನು ಬೋಧನೆ ಮಾಡುವ ರಾಜ್ಯದ ವಿವಿಗಳ ಬೋಧನಾ ಮಂಡಳಿಗಳು ಅಧ್ಯಕ್ಷರೊಂದಿಗೆ ಸಂವಾದ ನಡೆಸಲಿವೆ.
ಈ ಸಂವಾದದಲ್ಲಿ ಭಾಗವಹಿಸುವವರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ವಿಭಾಗಗಳ ವಿಶೇಷತೆ, ಕೋರ್ (ಪ್ರಮುಖ ಮತ್ತು ಸಣ್ಣ) ಮತ್ತು ಸಾಮಾನ್ಯ ಕೋರ್ಸ್ಗಳ ವಿತರಣೆ, ಕೋರ್ಸ್ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಎಷ್ಟು ಆಯ್ಕೆ ನೀಡಬೇಕು (ಓಪನ್ ಎಲೆಕ್ಟಿವ್) ಎಂಬ ವಿಷಯಗಳ ಚರ್ಚೆ ನಡೆಯಲಿದೆ. 3 ವರ್ಷದ ಪದವಿಗೆ ಓಪನ್ ಎಲೆಕ್ಟಿವ್ ಬೇಕೇ ಅಥವಾ ಈ ಹಿಂದೆ ಇದ್ದ ಮಾದರಿಯಲ್ಲಿಯೇ 3 ಐಚ್ಛಿಕ ವಿಷಯಗಳನ್ನು ನೀಡುವುದು, ಅಥವಾ ಹೊಸ ಮಾದರಿ ಅಳವಡಿಸಿಕೊಳ್ಳಬಹುದೆ ಎಂಬುದರ ಬಗ್ಗೆ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಊರಿಗೋದ್ರೂ ಸಿಗುತ್ತೆ!: ಬೇಸಿಗೆಯಲ್ಲಿ ಮಕ್ಕಳು ಎಲ್ಲಿರಲಿದ್ದಾರೆ, ಯಾವ ಶಾಲೆಗೆ ಮಕ್ಕಳಿಗೆ ಊಟ ವಿತರಣೆ ಮಾಡಬೇಕೆಂಬ ಬಗ್ಗೆಯೂ ಪಾಲಕರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂಬಂಧ ಪಟ್ಟ ಮಕ್ಕಳನ್ನು ಆಯಾ ಊರಿನ ಶಾಲೆಯಲ್ಲಿ ಮಕ್ಕಳಿಗೆ ಊಟ ನೀಡುವ ವ್ಯವಸ್ಥೆ ಮಾಡಲಾ ಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
55 ಲಕ್ಷ ಮಕ್ಕಳಿಗೆ ಊಟ: ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 55 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಬೇಸಿಗೆಯಲ್ಲಿ ಎಷ್ಟು ಮಕ್ಕಳು ಊಟ ಸವಿಯಲು ಇಚ್ಛಿಸುತ್ತಾರೆ ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.