ಫೋನ್ ಕಿತ್ಕೊಂಡ ಪ್ರಾಂಶುಪಾಲರು; ಜೀವವನ್ನೇ ಕಳೆದುಕೊಂಡ ವಿದ್ಯಾರ್ಥಿ!

Untitled design - 2023-11-03T205033.488
Published on

ಒಡಿಶಾ: ಶಾಲೆಯ ಪ್ರಾಂಶಪಾಲರೊಬ್ಬರು 10ನೇ ತರಗತಿ ವಿದ್ಯಾರ್ಥಿ ಬಳಿಯಿದ್ದ ಮೊಬೈಲ್​ ಫೋನ್​ ಕಿತ್ತುಕೊಂಡ ಬೆನ್ನಲ್ಲೇ ಬಾಲಕ ಮರಕ್ಕೆ ನೇಣು ಬಿಗಿದುಕೊಂಡು, ಸಾವಿಗೆ ಶರಣಾದ ಘಟನೆ ಒಡಿಶಾದ ಖೋರ್ಧಾ ಪಟ್ಟಣದ ಖಾಸಗಿ ಶಾಲೆಯಲ್ಲಿ ವರದಿಯಾಗಿದೆ.

ಒಡಿಶಾದ ಖೋರ್ಧಾ ಪಟ್ಟಣದ ಖಾಸಗಿ ಶಾಲೆಯ 10ನೇ ತರಗತಿಯ ಬಾಲಕನೊಬ್ಬ ಶುಕ್ರವಾರ (ನ.3) ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಾಲೆಯ ಪ್ರಾಂಶುಪಾಲರು ಆತನ ಬಳಿಯಿದ್ದ ಮೊಬೈಲ್ ಫೋನ್ ತೆಗೆದುಕೊಂಡು ಹೋದ ಕೆಲವು ಗಂಟೆಗಳ ನಂತರ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಗಜಪತಿ ಜಿಲ್ಲೆಯ ಬಾಲಕ ಶಾಲೆಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದು, ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಸ್ಕೂಲ್​ನ ಪ್ರಾಂಶುಪಾಲರು ವಿದ್ಯಾರ್ಥಿಯ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದರಿಂದ ಬಾಲಕ ತನ್ನ ಜೀವನವನ್ನು ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ತಲುಪಿದ ಪೊಲೀಸ್​ ಅಧಿಕಾರಿಗಳು ಶವವನ್ನು ಹೊರತೆಗೆದಿದ್ದಾರೆ.

ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದು, ಮೃತ ವಿದ್ಯಾರ್ಥಿಯು ಈ ನಿಯಮವನ್ನು ಉಲ್ಲಂಘಿಸಿ ತನ್ನ ಬಳಿ ಮೊಬೈಲ್ ಫೋನ್ ಇಟ್ಟುಕೊಂಡಿದ್ದ ಎಂದು ಹೇಳಿದ್ದಾರೆ. "ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಸಾವಿನ ಹಿಂದಿರುವ ಕಾರಣದ ಬಗ್ಗೆ ನಾವು ಎಲ್ಲಾ ಕೋನಗಳಲ್ಲಿ ಪರಿಶೀಲಿಸುತ್ತಿದ್ದೇವೆ. ಘಟನೆಯ ಬಗ್ಗೆ ವಿದ್ಯಾರ್ಥಿಯ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net