

ಹಾಸನ: ಜಿಲ್ಲೆಗೆ ನ.7ರಂದು ಸದಾನಂದಗೌಡರ ನೇತೃತ್ವದಲ್ಲಿ ಬಿಜೆಪಿ ಬರ ಅಧ್ಯಯನ ತಂಡ ಆಗಮಿಸಲಿದ್ದು, ಎಲ್ಲಾ ತಾಲೂಕಿಗೂ ಪ್ರಯಾಣ ಬೆಳೆಸಿ ರೈತರ ಸಂಕಷ್ಟದ ಬಗ್ಗೆ ಮಾಹಿತಿ ಪಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಕಿಡಿಕಾರಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ರೈತ ವಿರೋಧಿ ನೀತಿ ತಾಳಿರುವುದರಿಂದ ಬಿಜೆಪಿ 16 ತಂಡ ಮಾಡಿ ಪ್ರತಿ ತಂಡ ಎರಡೆರಡು ಜಿಲ್ಲೆಯನ್ನು ಪರಿಶೀಲಿಸಲಿದೆ. ಸದಾನಂದಗೌಡರ ನೇತೃತ್ವದಲ್ಲಿ ತಂಡ ಬರುತ್ತಿದ್ದು, ನಾನು ಮತ್ತು ಇಲ್ಲಿನ ಪ್ರೀತಂ ಜೆ. ಗೌಡರು ಜತೆಯಲ್ಲಿ ಇರುತ್ತೇವೆ. ಆನೆ ದಾಳಿ, ಚಿರತೆ ದಾಳಿ, ಹಾವು ಕಡಿದು ಸಾವನ್ಪಪಿರುವುದು, ಬೆಳೆ ನಷ್ಟ ಸೇರಿದಂತೆ ರೈತರು ಎಲ್ಲೆಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಆ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ ತಕ್ಷಣ ಹಣ ಬಿಡುಗಡೆ ಮಾಡುವುದಕ್ಕೆ ಒತ್ತಾಯಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳನ್ನು ಮತ್ತು ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ ಮತ್ತು ಗುತ್ತಿಗೆದಾರರಿಂದ ಕಮಿಷನ್ ವಿಚಾರ ಇತರೆ ದಂಧೆಯಲ್ಲೆ ಮುಳುಗಿದ್ದಾರೆ ಹೊರತು ಅಭಿವೃದ್ಧಿ ಕಡೆಗೆ ಗಮನ ಕೊಡುತ್ತಿಲ್ಲ. ಇನ್ನು ರಾಜ್ಯ ಸರಕಾರವು ಏಕೆ ಬರ ಪರಿಹಾರವನ್ನು ನೀಡಿಲ್ಲ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ 216 ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ ಸುಮಾರು 66 ಸಾವಿರ ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಹಣ ಬಂದಿದೆ. ಆದರೆ ಬರ ಪರಿಹಾರಕ್ಕೆ ಏಕೆ ಹಣ ಬಿಡುಗಡೆ ಮಾಡಿಲ್ಲ. 600 ಕೋಟಿ ರೂ ಎಸ್‌ಡಿಪಿಯಲ್ಲಿ ಹಣವಿದ್ದು, ಬರ ಪರಿಹಾರ ನಿಧಿಗೆ ಏಕೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ವಾರದಿಂದ ಸಿದ್ದರಾಮಯ್ಯ ಅವರು ಕನ್ನಡದ ಅಸ್ಮಿತೆ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಕಾವೇರಿ ನದಿ ನೀರು, ಮಹದಾಯಿ, ಮೇಕೆದಾಟು ವಿಚಾರದಲ್ಲಿ ನಮಗೆ ಮೋಸ ಮಾಡುತ್ತಿದ್ದಾರೆ ಎಂದಿದ್ದಾರೆ. ಮೇಕೆದಾಟು ಯೋಜನೆ ಸುಪ್ರಿಂಕೋರ್ಟಿನಲ್ಲಿದ್ದು, ಶೀಘ್ರ ತೀರ್ಪು ಬರಬೇಕೆಂದು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಇಷ್ಟಿದ್ದರೂ ಕೇಂದ್ರ ಸರಕಾರವು ನ್ಯಾಯ ಕೊಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್, ಮಾಜಿ ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾ ಉಪಾಧ್ಯಕ್ಷ ಆಡುವಳ್ಳಿ ಪ್ರಕಾಶ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ವಿಭಾಗ ಸಂಘಟನಾ ಕಾರ್ಯದರ್ಶಿ ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಮನೋಜ್, ಪ್ರವೀಣ್ ಇತರರು ಉಪಸ್ಥಿತರಿದ್ದರು.