ವಿಚಿತ್ರ ಬೆಳಕು: ಪುದುಚೇರಿಯ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದ ಯುವಜೋಡಿಗೆ 2ನೇ ದಿನ ಕಾದಿತ್ತು ಬಿಗ್​ ಶಾಕ್​!

Hidden Camera
Published on

ಚೆನ್ನೈ: ಪ್ರವಾಸಿ ತಾಣ ಪುದುಚೇರಿಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಪ್ರವಾಸಿಗರನ್ನು ಚಿಂತೆಗೆ ದೂಡಿದೆ. ಲಾಡ್ಜ್​ ರೂಮ್​ನಲ್ಲಿ ಅಳವಡಿಸಿದ್ದ ರಹಸ್ಯ ಕ್ಯಾಮೆರಾವನ್ನು ಯುವ ಜೋಡಿ ಪತ್ತೆಹಚ್ಚಿದ್ದು, ಈ ಪ್ರಕರಣ ಇದೀಗ ಪುದುಚೇರಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ರಹಸ್ಯ ಕ್ಯಾಮೆರಾಗಳ ಸಮಸ್ಯೆಯಿಂದಾಗಿ, ಪೊಲೀಸರು ಪುದುಚೇರಿಯಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಜನರ ಸುರಕ್ಷತೆಯನ್ನು ಖಚಿತಪಡಿಸಿದ್ದಾರೆ. ಈ ಕ್ಯಾಮೆರಾಗಳು ಆರೋಪಿಗಳನ್ನು ಹಿಡಿಯುವಲ್ಲಿ ಪರಿಣಾಮಕಾರಿಯಾಗಿದ್ದರೂ ಕೆಲವು ಕಿಡಿಗೇಡಿಗಳು ಸಾರ್ವಜನಿಕ ಸ್ಥಳಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಬಳಸುತ್ತಿರುವು ಆಘಾತಕಾರಿಯಾಗಿದೆ.

ಇತ್ತೀಚೆಗೆ ತಮಿಳುನಾಡಿನಲ್ಲೂ ನಡೆದಿತ್ತು

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ, ದೇವಸ್ಥಾನದ ಸ್ನಾನಗೃಹದಲ್ಲಿ ಮಹಿಳಾ ಉದ್ಯೋಗಿಗಳ ಬೆತ್ತಲೆ ಚಿತ್ರಗಳನ್ನು ಸೆರೆಹಿಡಿಯಲು ಪೆನ್ ಕ್ಯಾಮೆರಾವನ್ನು ಬಳಸಿ ಸಿಕ್ಕಿಬಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ವಿರುದ್ಧ ದೂರು ದಾಖಲಾಗಿದೆ. ಈ ಘಟನೆಯು ಖಾಸಗಿತನ ಸುರಕ್ಷತೆಯ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವಿಶೇಷವಾಗಿ ಹೋಟೆಲ್‌ಗಳು, ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ತಮ್ಮ ಕುಟುಂಬದೊಂದಿಗೆ ಇರುವ ಜನರನ್ನು ಚಿಂತೆಗೆ ದೂಡುವಂತೆ ಮಾಡಿದೆ.

ಯುವಜೋಡಿಯ ಪಾಲಿಗೆ ಕರಾಳ ದಿನ

ಇನ್ನು ಪುದುಚೇರಿ ಒಂದು ಸುಂದರ ಪ್ರವಾಸಿ ತಾಣ. ವಾರಾಂತ್ಯದಲ್ಲಿ ಇಲ್ಲಿಗೆ ತಂಡೋಪತಂಡವಾಗಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ತಮ್ಮ ಕುಟುಂಬ ಸಮೇತ ಬರುತ್ತಾರೆ. ಅಲ್ಲದೆ, ಯುವ ಜೋಡಿಗಳು ಪ್ರಕೃತಿಯ ಸೌಂದರ್ಯ ಸವಿಯಲು ಆಗಮಿಸುತ್ತಾರೆ. ಅದೇ ರೀತಿ ಶನಿವಾರ ರೆಡ್ಯಾರ್ಪಾಳ್ಯಂ ಮೂಲದ ಯುವಜೋಡಿ, ಪುದುಚೇರಿಯ ಜೆಜೆ ರೆಸಿಡೆನ್ಸಿ ಲಾಡ್ಸ್​ನಲ್ಲಿ ಉಳಿದುಕೊಂಡಿದ್ದರು. ಆದರೆ, ಆ ದಿನ ತಮ್ಮ ಪಾಲಿಗೆ ಕರಾಳ ದಿನ ಆಗಿರುತ್ತದೆ ಎಂದು ಅವರು ಭಾವಿಸಿರಲಿಲ್ಲ.

ವಿಚಿತ್ರ ಫ್ಲ್ಯಾಶಿಂಗ್ ಲೈಟ್​ 

ಇಡೀ ದಿನ ಹೊರಗಡೆ ಸುತ್ತಾಡಿ, ಸಮಯ ಕಳೆದು ವಿಶ್ರಾಂತಿ ಪಡೆಯಲು ರೂಮಿಗೆ ಬಂದರು. ತಮ್ಮ ಎರಡನೇ ದಿನ ವಾಸ್ತವ್ಯದ ವೇಳೆ ಕೋಣೆಯ ಒಳಗೆ ಬೆಡ್​ ಮೇಲಿರುವ ಪ್ಲಗ್​ ಪಾಯಿಂಟ್​ ರಂಧ್ರದಿಂದ ವಿಚಿತ್ರ ಫ್ಲ್ಯಾಶಿಂಗ್ ಲೈಟ್​ ಬರುತ್ತಿರುವುದನ್ನು ಗಮನಿಸಿದರು. ತಕ್ಷಣ ಏನೆಂದು ನೋಡಿದಾಗ ಅಲ್ಲಿ ಕ್ಯಾಮೆರಾ ಇರುವುದನ್ನು ಕಂಡು ದಂಗಾದರು. ಯುವ ಜೋಡಿ ರೂಮಿನಲ್ಲಿದಷ್ಟು ಸಮಯ ಅವರ ಎಲ್ಲ ಚಲನವಲನವನ್ನು ಕ್ಯಾಮೆರಾ ರೆಕಾರ್ಡ್​ ಮಾಡಿತ್ತು.

ನಮ್ಮ ಕೈವಾಡ ಇಲ್ಲ ಎಂಬ ವಾದ

ಕ್ಯಾಮೆರಾ ಬಗ್ಗೆ ತಿಳಿಯುತ್ತಿದ್ದಂತೆ ಹೋಟೆಲ್​ ಸಿಬ್ಬಂದಿಯನ್ನು ಯುವ ಜೋಡಿ ಪ್ರಶ್ನೆ ಮಾಡಿದ್ದಾರೆ. ಆದಾಗ್ಯೂ ಹೋಟೆಲ್​ ಸಿಬ್ಬಂದಿ, ಇದರಲ್ಲಿ ನಮ್ಮ ಕೈವಾಡ ಏನೂ ಇಲ್ಲ ಎಂದು ವಾದಿಸಿದ್ದಾರೆ. ಇದನ್ನು ಇಲ್ಲಿಗೆ ಬಿಟ್ಟರೆ ಸರಿ ಹೋಗುವುದಿಲ್ಲ ಎಂದರಿತ ಯುವ ಜೋಡಿ, ಉರುಳಾಯನಪೇಟೆ ಪೊಲೀಸ್​ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದರು.

ಕ್ಯಾಮೆರಾ ಇರುವುದು ದೃಢ

ಪೊಲೀಸರು ಆರಂಭದಲ್ಲಿ ದೂರನ್ನು ಸ್ವೀಕರಿಸದೇ ವಜಾಗೊಳಿಸಿದ್ದಾರೆ ಎಂದು ಬಹಿರಂಗವಾದಾಗ, ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಾರ್ವಜನಿಕರ ಒತ್ತಡಕ್ಕೆ ಮಣಿದ ಪೊಲೀಸರು ಕೊನೆಗೂ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಕೊಠಡಿಯಲ್ಲಿ ಕ್ಯಾಮೆರಾ ಇರುವುದು ದೃಢಪಟ್ಟಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇಬ್ಬರು ಆರೋಪಿಗಳಿಗಾಗಿ ಶೋಧ

ತನಿಖೆ ಮುಂದುವರಿದಂತೆ ಇಬ್ಬರು ಹೋಟೆಲ್ ಉದ್ಯೋಗಿಗಳಾದ ಆನಂದು ಮತ್ತು ಅಬ್ರಹಾಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಪೊಲೀಸರು ಅವರನ್ನು ಬಂಧಿಸುವ ಮೊದಲು, ಆರೋಪಿಗಳಿಬ್ಬರು ಎಸ್ಕೇಪ್​ ಆಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಸದ್ಯಕ್ಕೆ ತಿಳಿದಿಲ್ಲ. ಇಬ್ಬರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ನ್ಯಾಯ ದೊರಕುವ ವಿಶ್ವಾಸ

ಈ ಹಗರಣವು ಪುದುಚೇರಿಯಲ್ಲಿ ಜನರ ಸುರಕ್ಷತೆ ಮತ್ತು ಗೌಪ್ಯತೆಯ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಪ್ರವಾಸಿಗರ ತಾಣವಾಗಿರುವುದರಿಂದ ಲಾಡ್ಜ್​, ಹೋಟೆಲ್​ನಲ್ಲಿ ಉಳಿದುಕೊಳ್ಳುವವರು ಇದೀಗ ಭಾರೀ ಚಿಂತೆ ಮಾಡುವಂತಾಗಿದೆ. ಸದ್ಯ ತನಿಖೆ ಮುಂದುವರೆದಿದ್ದು, ಮುಂದೆಯೂ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡುವ ವಿಶ್ವಾಸವನ್ನೂ ಜನರು ಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net