

ನವದೆಹಲಿ : ದೇಶದ್ರೋಹದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಮಣಿಪುರದ ರಾಜಕೀಯ ಚಳುವಳಿಗಾರ ಲೈಚೊಂಬಂ ಎರೆಂದ್ರೋ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 'ಸಗಣಿ ಮತ್ತು ಗೋಮೂತ್ರ ಕೆಲಸ ಮಾಡುವುದಿಲ್ಲ' ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಸಂಬಂಧದಲ್ಲಿ 37 ವರ್ಷ ವಯಸ್ಸಿನ ಎರೆಂದ್ರೋ ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು ಎನ್ನಲಾಗಿದೆ.
ಬಿಜೆಪಿಯ ಮಣಿಪುರ ರಾಜ್ಯಾಧ್ಯಕ್ಷ ಸೈಕೋಂ ತೀಕೇಂದ್ರ ಸಿಂಗ್ ಅವರ ಸಾವಿನ ಬಗೆಗೆ ಎರೇಂದ್ರೋ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು ಎಂದು ದೂರು ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಎರೆಂದ್ರೋ ಅವರನ್ನು ಕಠಿಣ ಕಾನೂನಾದ ನ್ಯಾಷನಲ್ ಸೆಕ್ಯುರಿಟಿ ಆ್ಟಕ್ಟ್ನಡಿಯಲ್ಲಿ ಬಂಧಿಸಿದ ಪೊಲೀಸರ ಕ್ರಮದ ವಿರುದ್ಧ ಅವರ ತಂದೆ ರಿಟ್ ಅರ್ಜಿ ಸಲ್ಲಿಸಿದ್ದರು.
ಎರೆಂದ್ರೊ ಅವರನ್ನು ಇಂದು ಸಂಜೆ 5 ಗಂಟೆಯೊಳಗೆ ಬಿಡುಗಡೆ ಮಾಡಬೇಕೆಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಂ.ಆರ್.ಷಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿತು. ಅವರನ್ನು ಬಂಧನದಲ್ಲಿಡುವುದರಿಂದ ಸಂವಿಧಾನ ಪರಿಚ್ಛೇದ 21 ರಡಿಯ ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, 1000 ರೂ.ಗಳ ವೈಯಕ್ತಿಕ ಬಾಂಡ್ನ ಮೇಲೆ ಬಿಡುಗಡೆ ಮಾಡಬೇಕು ಎಂದಿತು. (ಏಜೆನ್ಸೀಸ್)