ಪರಿಶಿಷ್ಟರಲ್ಲಿ ಕೆನೆಪದರ: ಸಾಂವಿಧಾನಿಕ ಪೀಠದ ತೀರ್ಪು ಮರುಪರಿಶೀಲನೆ ಅಗತ್ಯವೆಂದ ಸುಪ್ರೀಂಕೋರ್ಟ್

SUPREME COURT Manollasa Image
Published on

ನವದೆಹಲಿ: ಪರಿಶಿಷ್ಟ ಜಾತಿಯೊಳಗಿನ (ಎಸ್​ಸಿ) ಉಪಜಾತಿಗಳಿಗೂ ಮೀಸಲಾತಿ ಕಲ್ಪಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ಈ ಮೂಲಕ ಎಸ್​ಸಿ ಮೀಸಲಾತಿಯಲ್ಲಿ ಕೆನೆಪದರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಎಸ್​ಸಿಯೊಳಗಿನ ಕೆಲವು ನಿರ್ದಿಷ್ಟ ಉಪಜಾತಿಗಳಿಗೆ ಆದ್ಯತೆ ನೀಡುವುದರ ವಿರುದ್ಧ ಸವೋನ್ನತ ನ್ಯಾಯಾಲಯದ ಸಾಂವಿಧಾನಿಕ ಪೀಠ 2004ರಲ್ಲಿ ನೀಡಿದ್ದ ತೀರ್ಪನ್ನು ಒಪ್ಪಲು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ ನಿರಾಕರಿಸಿದೆ. ಅಲ್ಲದೆ, ಇದುವರೆಗೆ ಮೀಸಲಾತಿ ಸೌಲಭ್ಯದ ಲಾಭ ಪಡೆಯದಿರುವ ಗುಂಪುಗಳಿಗೆ ಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದೆ.

ರಾಜ್ಯಗಳು ಎಸ್​ಸಿ ಮೀಸಲಾತಿಯೊಳಗೇ ಉಪಜಾತಿಗಳನ್ನು ವರ್ಗೀಕರಿಸಬಹುದೇ ಹಾಗೂ ಅವುಗಳಿಗೆ ಮೀಸಲಾತಿ ಕಲ್ಪಿಸಬಹುದೇ ಎಂದು ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಪೀಠ ನಿಲುವನ್ನು ಸ್ಪಷ್ಟಪಡಿಸಿದೆ. ಉಪಜಾತಿಗಳಿಗೆ ಮೀಸಲಾತಿ ಒದಗಿಸುವುದರಿಂದ ಸಂವಿಧಾನದ 341ನೇ ವಿಧಿಯನ್ವಯ ರಾಷ್ಟ್ರಪತಿಯವರು ಹೊರಡಿಸಿದ ಆದೇಶದ ಉಲ್ಲಂಘನೆಯಾಗುವುದಿಲ್ಲ ಎಂದೂ ಅದು ಹೇಳಿದೆ.

2004ರಲ್ಲಿ ಇ.ವಿ. ಚಿನ್ನಯ್ಯ ಪ್ರಕರಣದ ತೀರ್ಪು ಪರಿಪೂರ್ಣ ಎನಿಸುವುದಿಲ್ಲ. ಹೀಗಾಗಿ ಇದನ್ನು ಏಳು ಅಥವಾ ಇನ್ನೂ ಹೆಚ್ಚು ನ್ಯಾಯಮೂರ್ತಿಗಳ ಪೀಠದ ಪರಿಶೀಲನೆಗೆ ಒಪ್ಪಿಸುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಮುಂದೆ ಪ್ರಸ್ತಾಪಿಸುವುದಾಗಿ ನ್ಯಾಯಪೀಠ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net