

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಕಳೆದ ವಾರವಷ್ಟೇ ರೆಪೊ ದರವನ್ನು ಶೇಕಡ 0.25ರಷ್ಟು ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ಬ್ಯಾಂಕುಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿವೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ಬಿಐ) ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ರೆಪೊ ದರ ಆಧರಿತ ಎಕ್ಸ್ಟರ್ನಲ್ ಬೆಂಚ್ವಾರ್ಕ್ ಲೆಂಡಿಂಗ್ ರೇಟ್ (ಇಬಿಎಲ್ಆರ್) ಅನ್ನು ಶೇ.9.15ರಿಂದ ಶೇ.8.90ಕ್ಕೆ ಇಳಿಸಿದೆ. ರೆಪೊ ಆಧರಿತ ಸಾಲದ ಬಡ್ಡಿದರವನ್ನು (ಆರ್ಎಲ್ಎಲ್ಆರ್) ಶೇ.8.75ರಿಂದ ಶೇ.8.50ಗೆ ತಗ್ಗಿಸಲಾಗಿದೆ.
ಶನಿವಾರದಿಂದಲೇ ಈ ಬಡ್ಡಿದರ ಕಡಿತದ ಆದೇಶ ಜಾರಿಗೆ ಬಂದಿದೆ ಎಂದು ಎಸ್ಬಿಐ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. ಎಸ್ಬಿಐನ ಗೃಹ ಸಾಲ ಸೇರಿದಂತೆ ರೆಪೊ ಆಧರಿತ ಇತರ ಸಾಲ ಪಡೆದವರಿಗೆ ಬಡ್ಡಿದರ ಕಡಿತದ ಈ ಪ್ರಯೋಜನ ಸಿಗಲಿದೆ. ಆದರೆ, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧರಿತ ಸಾಲ (ಎಂಸಿಎಲ್ಆರ್) ಮತ್ತು ಬೆಂಚ್ವಾರ್ಕ್ ಪ್ರೖೆಮ್ ಲೆಂಡಿಂಗ್ ರೇಟ್ (ಬಿಪಿಎಲ್ಆರ್) ಆಧರಿತ ಸಾಲದ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಬಹುತೇಕ ಗೃಹ ಸಾಲಗಾರರು ರೆಪೊ ಆಧರಿತ ಸಾಲ ಪಡೆಯಲು ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.