20 ವರ್ಷದಿಂದ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ಸ್ಲೀಪಿಂಗ್​ ಪ್ರಿನ್ಸ್​ ಅಲ್ವಲೀದ್ ಬಿನ್ ಖಲೀದ್ ನಿಧನ! Saudi Sleeping Prince

Saudi Sleeping Prince
Published on

Saudi Sleeping Prince : ಸೌದಿ ಅರೇಬಿಯಾದ ರಾಜಕುಮಾರ ಅಲ್ವಲೀದ್ ಬಿನ್ ಖಲೀದ್ (36) ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ 20 ವರ್ಷಗಳಿಂದ ಕೋಮಾದಲ್ಲಿದ್ದ ಅವರು ಶನಿವಾರ (ಜುಲೈ 19) ನಿಧನರಾದರು. ಸುದೀರ್ಘ ಕೋಮಾದಲ್ಲಿದ್ದ ಕಾರಣಕ್ಕೆ ಅವರನ್ನು ಸೌದಿ ಅರೇಬಿಯಾದ ಸ್ಲೀಪಿಂಗ್ ಪ್ರಿನ್ಸ್ ಎಂದೇ ಕರೆಯಲಾಗುತ್ತಿತ್ತು.

ರಾಜಕುಮಾರ ಅಲ್ವಲೀದ್ ಬಿನ್ ಖಲೀದ್, ಸೌದಿ ಅರೇಬಿಯಾದ ರಾಜಮನೆತನದ ಸದಸ್ಯ. 1990 ಏಪ್ರಿಲ್ ತಿಂಗಳಲ್ಲಿ ಜನಿಸಿದ ಪ್ರಿನ್ಸ್ ಅಲ್ವಲೀದ್, ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ಅವರ ಹಿರಿಯ ಮಗ ಮತ್ತು ಬಿಲಿಯನೇರ್ ಉದ್ಯಮಿ ಪ್ರಿನ್ಸ್ ಅಲ್ವಲೀದ್ ಬಿನ್ ತಲಾಲ್ ಅವರ ಸೋದರಳಿಯ. 2005ರಲ್ಲಿ ಖಲೀದ್ ಲಂಡನ್‌ನ ಮಿಲಿಟರಿ ಅಕಾಡೆಮಿಯಲ್ಲಿ ಓದುತ್ತಿದ್ದಾಗ ಕಾರು ಅಪಘಾತದಲ್ಲಿ ಗಾಯಗೊಂಡರು. ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿ, ಕೋಮಾಗೆ ಜಾರಿದ್ದರು.

ಅಪಘಾತದ ಬಳಿಕ ಅಲ್ವಲೀದ್​ ಅವರನ್ನು ರಿಯಾದ್‌ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ನಗರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಸುಮಾರು 20 ವರ್ಷಗಳ ಕಾಲ ನಿರಂತರ ವೈದ್ಯಕೀಯ ಆರೈಕೆಯಲ್ಲಿ ಲೈಫ್​ ಸಪೋರ್ಟ್​ನಲ್ಲಿದ್ದರು. ಆಗಾಗ ತನ್ನ ಬೆರಳುಗಳನ್ನು ಆಡಿಸುವ ಮೂಲಕ ತಮ್ಮ ಜೀವಂತಿಕೆಯನ್ನು ಸಾಬೀತು ಪಡಿಸುತ್ತಿದ್ದರು. ಅಲ್ಲದೆ, ಅವರನ್ನು ಮರಳಿ ಸಹಜ ಜೀವನಕ್ಕೆ ಕರೆತರುವ ಭರವಸೆಯೂ ಮೂಡುತ್ತಿತ್ತು. ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಸ್ಪೇನ್‌ನ ತಜ್ಞರು ಕೂಡ ಖಲೀದ್‌ಗೆ ಚಿಕಿತ್ಸೆ ನೀಡಿದರು. ಆದರೆ, ಯಾವುದೇ ಫಲ ನೀಡಲಿಲ್ಲ. ನಿನ್ನೆ ಕೊನೆಯುಸಿರೆಳದಿದ್ದು ಇಂದು (ಜುಲೈ 20) ರಿಯಾದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಗ್ಲೋಬಲ್ ಇಮಾಮ್ಸ್ ಕೌನ್ಸಿಲ್, ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ದುರಂತ ಅಪಘಾತದ ನಂತರ ನಿಧನರಾದ ರಾಜಕುಮಾರ ಅಲ್ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ಅವರ ನಿಧನಕ್ಕೆ ಗ್ಲೋಬಲ್ ಇಮಾಮ್ಸ್ ಕೌನ್ಸಿಲ್ ತನ್ನ ಪ್ರಾಮಾಣಿಕ ಸಂತಾಪ ಮತ್ತು ಹೃತ್ಪೂರ್ವಕ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ ಎಂದಿದೆ.

ಅಲ್ಲಾಹನ ವಿಧಿಯಲ್ಲಿ ನಂಬಿಕೆಯಿಂದ ತುಂಬಿದ ಹೃದಯಗಳಿಂದ ಮತ್ತು ಆಳವಾದ ದುಃಖದಿಂದ, ನಮ್ಮ ಪ್ರೀತಿಯ ಮಗ ಪ್ರಿನ್ಸ್ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರನ್ನು ನಾವು ಶೋಕಿಸುತ್ತೇವೆ. ಅವರು ಇಂದು ಅಲ್ಲಾಹನ ಕರುಣೆಗೆ ಒಳಗಾಗಿ ನಿಧನರಾದರು ಎಂದು ಅವರ ತಂದೆ ಪ್ರಿನ್ಸ್ ಖಾಲಿದ್ ಬಿನ್ ತಲಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net