

ನಾವು ಸಾಕಷ್ಟು ಖರ್ಚು ಮಾಡಿ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದ್ದೇವೆ. ನಮ್ಮ ಮಕ್ಕಳಿಗಾಗಿ (ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ) ಸಾಕಷ್ಟು ಹಣವನ್ನು ಠೇವಣಿ ಇಟ್ಟಿದ್ದೇವೆ. ಹಾಗಾಗಿ ನಾವು ಕೃತಕೃತ್ಯರಾಗಿದ್ದೇವೆ’ - ಇವತ್ತು ಅನೇಕ ಜನ ಪಾಲಕರಲ್ಲಿ ಇರುವ ಭಾವನೆ ಇದು. ಅದು ತಪ್ಪಲ್ಲ, ಪಾಲಕರು ಮಕ್ಕಳ ಮುಂದಿನ ಜೀವನಕ್ಕಾಗಿ ಈ ವಿಧವಾದ ಮುಂಜಾಗ್ರತೆಯನ್ನು ವಹಿಸಬೇಕಾದದ್ದು ಸರಿಯಾದದ್ದೇ. ಅದು ಪಾಲಕರ ಕರ್ತವ್ಯವೇ ನಿಜ. ಆದರೆ ಅದಕ್ಕಿಂತ ಮಹತ್ವದ ಮತ್ತೊಂದು ಕರ್ತವ್ಯವೊಂದಿದೆ. ಅದು ಮಕ್ಕಳಿಗೆ ತಮ್ಮ (ತಂದೆ-ತಾಯಿಗಳ) ಪ್ರೀತಿಯನ್ನು ಹಂಚುವುದು.
ಪಾಲಕರು ಇಡಬೇಕಾದ ಮುಖ್ಯವಾದ ಹೆಜ್ಜೆ ಇದು. ಮಕ್ಕಳೊಂದಿಗೆ ಪ್ರೀತಿಯಿಂದ ಬಹಳ ಹೊತ್ತು ಮಾತನಾಡಬೇಕು. ಮಕ್ಕಳು ತಮ್ಮ ಪ್ರೀತಿಯ ಬಾಹುಬಂಧನದಲ್ಲಿ ಬೆಳೆಯಬೇಕು. ಮಕ್ಕಳಿಗೆ ಅಂತಹ ಪ್ರೀತಿಯಿಂದ ಸಿಗುವ ರಕ್ಷಣೆ ಮತ್ತಾವ ಮಾರ್ಗದಿಂದಲೂ ಸಿಗಲು ಸಾಧ್ಯವಿಲ್ಲ.
ಆದರೆ ಇವತ್ತಿನ ತಾಂತ್ರಿಕಯುಗದಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುವ ತಂದೆ-ತಾಯಿಗಳು ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುವುದನ್ನೇ ಮರೆತುಬಿಡುತ್ತಿದ್ದಾರೆ. ‘ಉದ್ಯೋಗ’ ‘ಉದ್ಯೋಗ’ ‘ಅಧಿಕಾರ’ ಎಂಬುದಾಗಿ ಸದಾ ಉದ್ಯೋಗವನ್ನೇ ಬೆನ್ನುಹತ್ತಿ, ಜೀವನಪೂರ್ತಿ ಹಣ ಸಂಪಾದಿಸುವುದರಲ್ಲಿಯೇ ಮುಳುಗುತ್ತಾರೆ. ಮಕ್ಕಳ ಕಡೆ ಗಮನ ಗಣನೀಯವಾಗಿ ಕುಂಠಿತವಾಗುತ್ತದೆ. ಅದರ ಪರಿಣಾಮ ಮಕ್ಕಳು ದುಷ್ಟಸಂಗಕ್ಕೆ ಬಲಿಯಾಗಿ, ದುಶ್ಚಟಗಳಿಗೆ ತುತ್ತಾಗಿ ನಲುಗಿಹೋಗುತ್ತಾರೆ.
ಮಕ್ಕಳಿಗೆ ಹಸಿವಾದಾಗ ಸಕಾಲಕ್ಕೆ ಆಹಾರ ಕೊಡಬೇಕು. ಹಸಿವು ಹಸಿವು ಎಂಬುದಾಗಿ ಕೇಳಿದಾಗಲೂ ಯೋಗ್ಯವಾದ ಆಹಾರ ಕೊಡದಿದ್ದರೆ ಮಕ್ಕಳು ಏನು ಮಾಡುತ್ತಾರೆ? ತಮ್ಮ ಕೈಗೆ ಸಿಕ್ಕ ಆಹಾರವನ್ನು ತಾವೇ ತೆಗೆದುಕೊಂಡು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಹೊರತು ತಂದೆ-ತಾಯಿಗಳು ಆಹಾರ ಕೊಟ್ಟಿಲ್ಲ, ಹಾಗಾಗಿ ಉಪವಾಸವಿರೋಣ ಎಂಬುದಾಗಿ ಕಾಯುವುದಿಲ್ಲ. ಅಲ್ಲವೇ?
ಆದ್ದರಿಂದ ಮಕ್ಕಳನ್ನು ಪ್ರೇಮದ ಹಸಿವಿನಿಂದ ಒದ್ದಾಡುವಂತೆ ಮಾಡಬೇಡಿ. ನಿಮ್ಮ ಪ್ರೇಮಧಾರೆಯನ್ನು ಮಕ್ಕಳ ಮೇಲೆ ಸುರಿಸಿ. ಆ ಪಾಲಕರ ಪ್ರೇಮಧಾರೆಯಲ್ಲಿ ಮಕ್ಕಳು ಮುಳುಗಿ ಮುಳುಗಿ ಏಳಲಿ. ಹೊರಗೆ ಪ್ರೇಮದ ಭಿಕ್ಷೆ ಬೇಡುವ ಆವಶ್ಯಕತೆ ಬರುವುದು ಬೇಡ. ತಂದೆ-ತಾಯಿಗಳ ಪ್ರೇಮದ ಆಕರ್ಷಣೆ ಎಲ್ಲವನ್ನೂ ಮೀರಿದ್ದಾಗಿರಬೇಕು ಎಂಬ ದೊಡ್ಡ ಸಂದೇಶವನ್ನು ಶ್ರೀಕೃಷ್ಣಪರಮಾತ್ಮ ತಾನು ಸ್ವತಃ ತನ್ನ ಮಕ್ಕಳನ್ನು ಹೆಚ್ಚು ಪ್ರೀತಿಸುವ ಮೂಲಕ ನಮಗೆಲ್ಲ ನೀಡುತ್ತಿದ್ದಾನೆ.
ಇಂದು ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗದಿದ್ದದ್ದಕ್ಕೆ ಕೆಲಸಗಳ ಒತ್ತಡದ ನೆಪ ಹೇಳುವ ತಂದೆ-ತಾಯಿಗಳು ಒಮ್ಮೆ ಕೃಷ್ಣನ ಕಥೆಯನ್ನು ಕೇಳಲೇಬೇಕು. ಕೃಷ್ಣನಿಗೆ ಇರುವಷ್ಟು ಕಾರ್ಯದೊತ್ತಡ ಇಂದು ಜಗತ್ತಿನಲ್ಲಿ ಯಾರಿಗೆ ಇದೆ ಹೇಳಿ? ಒಂದು ಕುಟುಂಬವನ್ನು ನಿರ್ವಹಿಸುವ ಒಬ್ಬ ತಂದೆಯೆಲ್ಲಿ? ಹದಿನಾಲ್ಕು ಲೋಕಗಳ ನಿರ್ವಹಣೆ ಮಾಡುವ ಆ ಭಗವಂತನೆಲ್ಲಿ? ಇಂತಹ ಅನಿತರಸಾಧಾರಣ ಜವಾಬ್ದಾರಿ ತನ್ನ ಹೆಗಲ ಮೇಲೆ ಇದ್ದರೂ ಶ್ರೀಕೃಷ್ಣಪರಮಾತ್ಮ ತಾನೊಬ್ಬ ತಂದೆಯಾಗಿ ಮನೆಯಲ್ಲಿ ಮಕ್ಕಳೊಂದಿಗೆ ಬೆರೆಯುತ್ತಾನೆ, ಮಕ್ಕಳೊಂದಿಗೆ ಪ್ರೀತಿಯಿಂದ ಕಾಲಕಳೆಯುತ್ತಾನೆ, ಪ್ರೀತಿಯ ಬಾಹುವಿನಲ್ಲಿ ಮಕ್ಕಳನ್ನು ಬೆಳೆಸುತ್ತಾನೆ. ಭಾಗವತ ಅದನ್ನು ಉಲ್ಲೇಖ ಮಾಡುತ್ತದೆ.
ಇದಲ್ಲದೆ ಮಕ್ಕಳಿಗೆ ಪ್ರೀತಿಯನ್ನು ಕೊಡುವುದರ ಜೊತೆಗೆ ಮಕ್ಕಳ ನಡುವಳಿಕೆಗಳ ಬಗ್ಗೆ ವಿಶೇಷ ಗಮನ ನೀಡಬೇಕಾದದ್ದೂ ಪಾಲಕರ ಮಹತ್ವದ ಕರ್ತವ್ಯವಾಗಿದೆ. ಶ್ರೀಕೃಷ್ಣಪರಮಾತ್ಮ ತಾನು 1108 ಸ್ತ್ರೀಯರನ್ನು ಮದುವೆಯಾಗಿ ಅಷ್ಟು ದೊಡ್ಡ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರೂ, ಯಾವ ಯಾವ ಮಕ್ಕಳು ಏನೇನು ದೈನಂದಿನ ಕಾರ್ಯಗಳನ್ನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸುವುದಕ್ಕಾಗಿ ತಾನು ಗೂಢವಾಗಿ (ಕೃಷ್ಣ ಎಂದು ಗೊತ್ತಾಗದಂತೆ) ತನ್ನ ಎಲ್ಲ ಮನೆಗಳಲ್ಲಿ ಸಂಚಾರ ಮಾಡುತ್ತಿದ್ದನಂತೆ.
ಈ ಮೂಲಕ ಪ್ರತಿಯೊಬ್ಬ ಪಾಲಕರೂ ತಮ್ಮ ತಮ್ಮ ಮಕ್ಕಳ ನಡುವಳಿಕೆಗಳನ್ನು ಗೂಢವಾಗಿ ಗಮನಿಸುತ್ತಿರಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಡುತ್ತಿದ್ದಾನೆ. ಮಕ್ಕಳ ಸ್ನೇಹಿತರು ಯಾರು, ಶಾಲೆಯಲ್ಲಿ ಹೇಗೆ ಓದುತ್ತಿದ್ದಾರೆ, ಮೊಬೈಲ್ ಇದ್ದರೆ ಯಾರಿಗೆ ಕಾಲ್-ಮೆಸೇಜ್ ಮಾಡುತ್ತಾರೆ ಈ ಮೊದಲಾದವುಗಳನ್ನು ಗೂಢವಾಗಿಯೇ ಗಮನಿಸುತ್ತಿರಬೇಕು. ದುಷ್ಟಮಾರ್ಗದಲ್ಲಿ ನಡೆಯದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಉತ್ತಮ ವಿದ್ಯಾಭ್ಯಾಸ ಕೊಡಿಸುವುದರ ಜೊತೆಗೆ ಉತ್ತಮ ಸಂಸ್ಕಾರವನ್ನೂ ಕೊಡಬೇಕಾದದ್ದು ಪಾಲಕರ ಮುಖ್ಯ ಕರ್ತವ್ಯ. ಇದೇ ಮಕ್ಕಳಿಗೆ ಪಾಲಕರು ಕೊಡಬೇಕಾದ ನಿಜವಾದ ಸಂಪತ್ತು.