

ತುರವೂರು: ಕಡಲ ತೀರ, ಹೊಳೆಗಳಲ್ಲಿ ಮೀನು ಹಿಡಿಯುವ ಬೆಸ್ತರಿಗೆ ಮೀನುಗಾರಿಕೆಯೇ ಬದುಕು. ತರಹೇವಾರಿ ಫಿಶ್ಗಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವ ಮೀನುಗಾರರು, ವರ್ಷ ಪೂರ ಲಭ್ಯವಾಗುವ ಮೀನುಗಳನ್ನೇ ನಂಬಿ, ಜೀವನ ಸಾಗಿಸುತ್ತಿದ್ದಾರೆ. ಹೀಗಿರುವ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಮೀನಿನ ದರ ದಿಢೀರ್ ಕುಸಿತ ಕಂಡರೆ ಮುಂದೇನು? ಎಂಬ ಚಿಂತೆ ಕಾಡುವುದು ಖಚಿತ. ಸಾಮಾನ್ಯವಾಗಿ ನಮಗೆಲ್ಲ ಹಾಗೂ ಮೀನುಗಾರರಿಗೆ ತಿಳಿದಿರುವಂತೆ ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ಬೆಲೆಯೂ ಉತ್ತಮ ಮಟ್ಟದಲ್ಲಿರುತ್ತದೆ. ಈ ಪೈಕಿ ಇಲ್ಲೊಂದು ಫಿಶ್ (Sardine Fish), ಕಳೆದ ನಾಲ್ಕು ತಿಂಗಳ ಹಿಂದೆ ಕೆಜಿಗೆ 400 ರೂ. ತಲುಪಿತ್ತು. ಇದು ಮೀನುಗಾರರಿಗೆ ಭರ್ಜರಿ ಉತ್ತಮ ಲಾಭ ತಂದುಕೊಟ್ಟರೆ, ಗ್ರಾಹಕರಿಗೆ ದರ ಏರಿಕೆ ಬಿಸಿ ಮುಟ್ಟಿಸಿತ್ತು.
ಕೇರಳದ ತುರವೂರಿನಲ್ಲಿ ದೋಣಿಯಲ್ಲಿ ಮೀನುಗಾರಿಕೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಅದೆಷ್ಟೋ ಸಂಖ್ಯೆಯ ಜನರಿಗೆ ಇದೀಗ ಭೂತಾಯ್ ಮೀನಿನ ದರ ಕುಸಿದಿರುವುದು ಅಕ್ಷರಶಃ ಕುಸಿದು ಬೀಳುವಂತೆ ಮಾಡಿದೆ. ಭೂತಾಯ್ ಬೆಲೆ ಕುಸಿತದಿಂದ ಚೆಲ್ಲಾನಂ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಅರ್ಥುಂಕಲ್‌ನಿಂದ ಪಲ್ಲಿತೋಡ್‌ವರೆಗಿನ ನೂರಾರು ಮೀನುಗಾರರು ಸದ್ಯ ಕಂಗಾಲಾಗಿದ್ದಾರೆ. ಇದೇ ನಾಲ್ಕು ತಿಂಗಳ ಹಿಂದೆ ಕೆಜಿಗೆ 400 ರೂ. ಏರಿದ್ದ ಈ ಮೀನು, ಈಗ ಕೇವಲ 15 ರೂ. ತಲುಪಿದೆ ಎಂದು ವರದಿಯಾಗಿದೆ. ಚೆಲ್ಲಾನಂ ಬಂದರಿನಿಂದ ಸಗಟು ಏಜೆನ್ಸಿಗಳು ಕೆಜಿಗೆ 15 ರೂ.ನಂತೆ ಮೀನುಗಾರರಿಂದ ಭೂತಾಯ್ ಮೀನನ್ನು ಖರೀದಿಸಿದೆ ಎನ್ನಲಾಗಿದೆ.
ಸದ್ಯ ಈ ಬೆಳವಣಿಗೆಯಿಂದ ಸಂಪೂರ್ಣವಾಗಿ ತತ್ತರಿಸಿರುವ ಸಣ್ಣ-ಪುಟ್ಟ ಮೀನುಗಾರರು, ಆಲಪ್ಪುಳ ಅರ್ತುಂಕಲ್‌ನಿಂದ ಕೊಚ್ಚಿಯವರೆಗೆ ನೂರಾರು ದೋಣಿಗಳು ಮೀನುಗಾರಿಕೆಗಾಗಿ ಚೆಲ್ಲಾನಂ ಬಂದರಿನಲ್ಲಿ ಕೇಂದ್ರೀಕೃತವಾಗಿವೆ. ಸಾರ್ವಜನಿಕ ಮಾರುಕಟ್ಟೆ ಇತ್ಯಾದಿಗಳಲ್ಲಿ ಬೆಲೆ ಬಂದಾಗ ಮೀನುಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಸರ್ಕಾರವು ಬಂದರಿನಲ್ಲಿ ವ್ಯವಸ್ಥೆ ಮಾಡಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ,(ಏಜೆನ್ಸೀಸ್).