

ಬೆಂಗಳೂರು: ಕ್ಷೇತ್ರದ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಆಶ್ವಾಸನೆ ನೀಡಿದ್ದಾರೆ.
ಬುಧವಾರ ಕ್ಷೇತ್ರ ವ್ಯಾಪ್ತಿಯ ಚಿಕ್ಕಪೇಟೆ, ಆರ್.ಟಿ. ಸ್ಟ್ರೀಟ್, ಅಂಚೆಪಾಳ್ಯ ಡಿ.ಆರ್. ಲೇಔಟ್ ಸೇರಿ ಮತ್ತಿತರರ ಕಡೆ ಸಾವಿರಾರು ಜನರು ಹಾಗೂ ಮುಖಂಡರ ಜೊತೆ ಬಿರುಸಿನ ಪ್ರಚಾರ ನಡೆಸಿದರು. ಚಿಕ್ಕಪೇಟೆಯಲ್ಲಿ ಹಲವಾರು ಉದ್ಯಮಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಪ್ತಗಿರಿಗೌಡ ಅವರ ಗಮನಸೆಳೆದರು.
ಈ ಭಾಗದಲ್ಲಿ ಕನಿಷ್ಠ ಮೂಲಸೌಕರ್ಯಗಳು ಇಲ್ಲದೆ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಎಂದು ನೋವು ತೊಡಗಿಕೊಂಡರು. ಇದಕ್ಕೆ ಸ್ಪಂದಿಸಿದ ಸಪ್ತಗಿರಿಗೌಡ, ರಸ್ತೆ ವಿಸ್ತರಣೆ, ಚರಂಡಿ ನಿರ್ಮಾಣ, ವೈಜ್ಞಾನಿಕ ಕಸ ವಿಲೇವಾರಿ, ಸಂಚಾರದಟ್ಟಣೆ ನಿವಾರಣೆ, ಅಸ್ಪತ್ರೆಗಳ ಆಧುನೀಕರಣ ಸೇರಿ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು.
ಮಂಡಲ ಅಧ್ಯಕ್ಷ ಸೈವಾನ್ ಸಿಂಗ್, ವಾರ್ಡ್ ಅಧ್ಯಕ್ಷ ಸನ್ನತ್ ಯುವ, ಒಬಿಸಿ ಅಧ್ಯಕ್ಷ ಕೃಷ್ಣ ಯಾದವ್, ಬಿಜೆಪಿ ಮುಖಂಡರಾದ ಶಿವಶಂಕರ್, ಜೈರಾಮ್, ಶ್ರೀನಿವಾಸ್, ರಂಜಿತ್ ಸೇರಿ ಅನೇಕ ಬಿಜೆಪಿ ಮುಖಂಡರು ಮತಯಾಚನೆಯಲ್ಲಿ ಸಪ್ತಗಿರಿಗೌಡಗೆ ಸಾಥ್ ನೀಡಿದರು.
ಇದಕ್ಕೂ ಮುನ್ನ ಸಪ್ತಗಿರಿಗೌಡ ಅವರು ಬೆಳಗ್ಗೆ ಕ್ಷೇತ್ರ ವ್ಯಾಪ್ತಿಯ ಬಿನ್ನಿಪೇಟೆ ಸೇರಿ ಮತ್ತಿತರ ಕಡೆ ಇಂದು ಬೆಳಗ್ಗೆಯಿಂದಲೇ ಬಿಬಿಎಂಪಿ ಮಾಜಿ ಸದಸ್ಯ ವಿ.ಟಿ.ಎಸ್. ನಾಗರಾಜ್, ಅವರ ಪುತ್ರ ಅಭಿನಾಗ್ ಸೇರಿ ಪಕ್ಷದ ಸಾವಿರಾರು ಕಾರ್ಯಕರ್ತ ಜತೆ ಮತಯಾಚನೆ ಮಾಡಿದರು.
ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಜತೆ ದಿನದ 24 ಗಂಟೆಯೂ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ತುರ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಶುದ್ಧ ನೀರು ಪೂರೈಕೆ ಘಟಕ ಅಳವಡಿಸುತ್ತೇವೆ ಎಂದು ತಿಳಿಸಿದರು.