ಜೀವ ಹೋದರು ಪರವಾಗಿಲ್ಲ ಮರದಿಂದ ಮಾತ್ರ ಕೆಳಗಿಳಿಯಲ್ಲ ಎಂದ ಬಾಲಕ! ಜನರಿಂದ ಭಾರಿ ಮೆಚ್ಚುಗೆ

Boy Protest
Published on

ಹೈದರಾಬಾದ್​: ಮರ ಬೆಳೆಸಿ ಕಾಡು ಉಳಿಸಿ ಎಂದು ಸರ್ಕಾರವೇ ಅಭಿಯಾನ ಮಾಡುತ್ತದೆ. ಆದರೆ, ಅದೇ ಸರ್ಕಾರ ಮೂಲ ಸೌಕರ್ಯ ಮತ್ತು ರಸ್ತೆ ಅಗಲೀಕರಣ ಹೆಸರಿನಲ್ಲಿ ಮರಗಳನ್ನು ಕಡಿಯುತ್ತದೆ. ಸಾಕಷ್ಟು ಮರಗಳ ಮಾರಣ ಹೋಮ ನಡೆದರೂ ಕೆಲವೊಮ್ಮೆ ಜನರು ನೋಡಿಯೂ ನೋಡದಂತೆ ಸುಮ್ಮನಿರುತ್ತಾರೆ. ಆದರೆ, ಇಲ್ಲೋಬ್ಬ ಬಾಲಕ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ಜನರ ಜೀವನಾಡಿ ಮರ ಉಳಿಸಲು ತನ್ನ ಪ್ರಾಣವನ್ನು ಅರ್ಪಿಸಲು ಮುಂದಾಗಿದ್ದಾರೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ರಾಮಚಂದ್ರಪುರಂ ಪಟ್ಟಣದ ಕಾಕತಿಯನಗರದ ಅನಿರುದ್ಧ್ ಹೆಸರಿನ 12 ವರ್ಷದ ಬಾಲಕ ಜಿಲ್ಲೆಯಲ್ಲಿ ಇದೀಗ ಭಾರಿ ಸುದ್ದಿಯಾಗಿದ್ದಾನೆ. ಬಾಲಕ ವಾಸವಿರುವ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡಲು ಗುತ್ತಿಗೆದಾರರೊಬ್ಬರು ಮರ ಕತ್ತರಿಸಲು ಬಂದಿದ್ದರು. ಕೆಲವೊಂದು ಮರಗಳನ್ನು ಕಟಾವು ಕೂಡ ಮಾಡಿದ್ದರು. ಇದೆಲ್ಲವನ್ನು ಗಮನಿಸಿದ ಅನಿರುದ್ಧ್, ಮರ ಕಡಿಯುವುದನ್ನು ತಡೆಯಲು ಮರವನ್ನೇರಿ, ಸುಮಾರು 7 ಗಂಟೆಗಳವರೆಗೆ ಊಟ, ನೀರು ಸೇವನೆ ಮಾಡದೆ ಪ್ರತಿಭಟನೆ ನಡೆಸಿದನು.

Telangana Boy 1

ನನ್ನ ಜೀವ ಹೋದರು ಸಹ ನಾನು ಮರವನ್ನು ಬಿಟ್ಟು ಇಳಿಯುವುದಿಲ್ಲ. ಅಧಿಕಾರಿಗಳು ಇಲ್ಲಿಗೆ ಬಂದು ಮರ ಕತ್ತರಿಸುವುದಿಲ್ಲ ಎಂದು ಆರ್ಡರ್​ ಕಾಪಿ ನೀಡಿದರೆ ಮಾತ್ರ ನಾನು ಮರದಿಂದ ಕೆಳಗೆ ಇಳಿಯುತ್ತೇನೆ. ಅಲ್ಲಿಯವರೆಗೆ ನೀವು ಏನೇ ಪ್ರಯತ್ನ ಮಾಡಿದರೂ ನಾನಂತೂ ಮರದಿಂದ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದನು.

ಅಂದಹಾಗೆ ಅನಿರುದ್ಧ್​ ತಂದೆ ಓರ್ವ ರಿಯಲ್​​ ಎಸ್ಟೇಟ್​ ಉದ್ಯಮಿ ಮತ್ತು ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನಿರುದ್ಧ್​, ಸ್ಧಾನಿಕಾ ನಾರಾಯಣ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಪ್ರಾಣಿ ಮತ್ತು ಸಸ್ಯಗಳ ಮೇಲೆ ಅಗಾಧವಾದ ಪ್ರೀತಿ ಹಾಗೂ ಕಾಳಜಿ ಹೊಂದಿರುವ ಅನಿರುದ್ಧ್​, ಗಿಡಗಳನ್ನು ನೆಡುವುದು ಪರಿಸರಕ್ಕೆ ಒಳತೇ ಹೊರತು ಅವುಗಳನ್ನು ನಾಶ ಮಾಡುವುದಲ್ಲ ಎಂದು ಪರಿಸರ ಕಾಳಜಿಯ ಪಾಠ ಮಾಡಿದ್ದಾನೆ. ಇದೀಗ ಅನಿರುದ್ಧ್​ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net