

ಬಾಗಲಕೋಟೆ: ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಾಗಲಕೋಟೆ ಕ್ಷೇತಕ್ಕೆ ‘ಕೈ’ ಅಭ್ಯರ್ಥಿಯಾಗಿ ಯಾರು ಹೊರಹೊಮ್ಮಲ್ಲಿದ್ದಾರೆ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿತ್ತು. ಈ ಮಧ್ಯೆ ಟಿಕೆಟ್ ಸ್ಪರ್ಧೆಯಲ್ಲಿದ್ದ ಶಾಸಕ ವಿಜಯಾನಂದ ಪತ್ನಿ ವೀಣಾ ಕಾಶಪ್ಪನವರ ಮತ್ತು ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮಧ್ಯೆ ಭಾರೀ ಹಣಾಹಣಿ ಇತ್ತು. ಆದ್ರೆ, ಕಾಂಗ್ರೆಸ್ ತನ್ನ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಸಂಯುಕ್ತಾಗೆ ಟಿಕೆಟ್ ಫೈನಲ್ ಆಯಿತು. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಬಲಿಗರೊಂದಿಗೆ ಸಭೆ ಕರೆದ ವೀಣಾ ಕಾಶಪ್ಪನವರ, ಟಿಕೆಟ್ ಕೈತಪ್ಪಿದ್ದಕ್ಕೆ ಕಣ್ಣೀರಿಟ್ಟರು.
ವೀಣಾ ಕಾಶಪ್ಪನವರಿಗೆ ಟಿಕೆಟ್ ಮಿಸ್ ಆಗಿದ್ದೇ ತಡ, ತೀವ್ರ ಅಸಮಾಧಾನ ಹೊರಹಾಕಿದ ಬೆಂಬಲಿಗರು, ಕಾಂಗ್ರೆಸ್ ಹಾಗೂ ಸಚಿವ ಶಿವಾನಂದ ಪಾಟೀಲ ಪುತ್ತಿ ಸಂಯುಕ್ತಾ ಪಾಟೀಲ ವಿರುದ್ಧ ಕಿಡಿಕಾರಿದರು. ಕೈ ಟಿಕೆಟ್ ತಪ್ಪಿದರೇನು, ಪಕ್ಷೇತರ ಅಭ್ಯರ್ಥಿಯಾಗಿ ನೀವು ಸ್ಪರ್ಧಿಸಿ, ನಾವು ಗೆಲ್ಲಿಸುತ್ತೇವೆ ಎಂದು ವೀಣಾ ಬೆಂಬಲಿಗರು ಧ್ವನಿ ಎತ್ತಿದರು. ಟಿಕೆಟ್ ವಿಚಾರವಾಗಿ ವೀಣಾ ದಂಪತಿ ಭಾರೀ ಬೇಸರ ವ್ಯಕ್ತಪಡಿಸಿದ ಹಿನ್ನೆಲೆ ಇದೀಗ ಸಂಯುಕ್ತಾ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ವೀಣಾ ನಮ್ಮಅಕ್ಕ ಇದ್ದಹಾಗೆ, ಕಾಂಗ್ರೆಸ್ ಒಂದು ಕುಟುಂಬ, ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಭಿಪ್ರಾಯ ಮೂಡುವುದು ಸಹಜ.ನಮ್ಮ ಹಿರಿಯರು, ಹೈಕಮಾಂಡ್ ಎಲ್ಲರನ್ನು ಒಗ್ಗೂಡಿಸುತ್ತಾರೆ. ವೀಣಾರನ್ನು ಶೀಘ್ರವೇ ಭೇಟಿ ಮಾಡ್ತೀನಿ. ಅಕ್ಕನನ್ನು ಬಿಟ್ಟು ಚುನಾವಣೆ ನಡೆಸೋದು ಹೇಗೆ? ಅವರು ಇರಬೇಕು. ನಾವೆಲ್ಲಾ ಸೇರಿ ಚುನಾವಣೆ ಮಾಡ್ತೇವೆ ಎಂದರು.
ಪಕ್ಷ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಅಭ್ಯರ್ಥಿಯಾಗಿದ್ದಕ್ಕೆ ನನಗೆ ಖುಷಿಯೂ ಇದೆ. ಕ್ಷೇತ್ರದಲ್ಲಿ ನನ್ನದೇ ಪ್ರತ್ಯೇಕ ಪ್ರಣಾಳಿಕೆ ಕೊಡ್ತೇನೆ. ಚುನಾವಣೆ ಗೆಲ್ಲಲು ಅನೇಕ ಯೋಜನೆಗಳನ್ನು ಕೂಡ ಹಾಕಿದ್ದೇವೆ ಎಂದು ಬಾದಾಮಿಯಲ್ಲಿ ಸಂಯುಕ್ತಾ ಪಾಟೀಲ ತಿಳಿಸಿದರು.