

Sambhal Kartikeya: ಉತ್ತರ ಪ್ರದೇಶದ ಸಂಭಾಲ್‌ನ ಖಗ್ಗು ಸರೈನಲ್ಲಿರುವ ಕಾರ್ತಿಕೇಯ ಮಹಾದೇವ ದೇಗುಲದಲ್ಲಿ ಇಂದು (ಮಾ.13) 46 ವರ್ಷಗಳ ಬಳಿಕ ಪ್ರಥಮ ಬಾರಿಗೆ ಬಣ್ಣಗಳ ಹಬ್ಬ ಹೋಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
1978ರ ಕೋಮು ಗಲಭೆಗಳ ಹಿನ್ನೆಲೆ ಈ ಪ್ರದೇಶ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಇದೇ ಕಾರಣಕ್ಕೆ ದೇವಾಲಯವನ್ನು ಮುಚ್ಚಲಾಗಿತ್ತು. ಆದರೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ದೇಗುಲವನ್ನು ಮತ್ತೆ ತೆರೆದಿದ್ದು, 46 ವರ್ಷಗಳ ನಂತರ ಇಲ್ಲಿನ ಜನರು ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಆಚರಣೆಯಲ್ಲಿ ಸಾಮಾಜಿಕ ಮತ್ತು ಹಿಂದೂ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದಾರೆ.
"ಖಗ್ಗು ಸರೈನಲ್ಲಿರುವ ಕಾರ್ತಿಕೇಯ ಮಹಾದೇವ ದೇವಸ್ಥಾನದಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಯಾರೂ ಆತಂಕ, ಭಯದ ಭೀತಿಯಲ್ಲಿರುವ ಅಗತ್ಯವಿಲ್ಲ. ಜನರು ಸುರಕ್ಷಿತ ವಾತಾವರಣದಲ್ಲಿ ಹಬ್ಬವನ್ನು ಆಚರಿಸಬಹುದು" ಎಂದು ಎಎಸ್‌ಪಿ ಶ್ರೀಶ್ ಚಂದ್ರ ಸ್ಥಳೀಯ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಜಿಲ್ಲಾಧ್ಯಕ್ಷ ಆನಂದ್ ಅಗರ್‌ವಾಲ್ ಮಾತನಾಡಿ, "46 ವರ್ಷಗಳ ನಂತರ, ಕಾರ್ತಿಕೇಯ ಮಹಾದೇವ ದೇವಾಲಯದಲ್ಲಿ ಹೋಳಿ ಆಡುವ ಭಾಗ್ಯ ನಮಗೆ ಸಿಕ್ಕಿದೆ. ವಿವಿಧ ಸಾಮಾಜಿಕ ಸಂಘಟನೆಗಳ ಜನರು ಇಲ್ಲಿ ಒಗ್ಗೂಡಿದ್ದಾರೆ, ಹೂವು, ಸಿಹಿ ಮತ್ತು ಬಣ್ಣಗಳೊಂದಿಗೆ ಇಲ್ಲಿನ ಜನ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತಾಗಿದೆ" ಎಂದು ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).