

ಹಾವೇರಿ: ರಾಜ್ಯ ಪದವೀಧರರ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ಟಿ.ಎಂ.ಎ.ಇ.ಎಸ್ ಮಹಾವಿದ್ಯಾಲಯದಲ್ಲಿ ಮೇ.31ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪದವೀಧರರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಘವೇಂದ್ರ ಬಾಸೂರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನತೆ ಸ್ವಯಂ ಉದ್ಯೋಗಿಗಳಾಗಲು, ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದರು.
ಸಕಾರಿ ನೌಕರರ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಈ ಮೊದಲಿನಂತೆ ಓಪಿಎಸ್ (ಹಳೇ ಪಿಂಚಣೆ ವ್ಯವಸ್ಥೆ)ಯನ್ನು ಮರು ಜಾರಿಗೆ ತರುವಂತೆ ಹಾಗೂ ನೌಕರರ ಹಿತ ಕಾಯುವಂತೆ ಸರ್ಕಾರಕ್ಕೆ ಒತ್ತಡ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಓಪಿಎಸ್ಗಾಗಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.
ಪದವೀಧರರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಯುವ ಜನತೆಯನ್ನು ಬೆಂಬಲಿಸಲು ಹಾಗೂ ಪದವೀಧರರ ಸಮಸ್ಯೆಗಳನ್ನು ಆಲಿಸಲು ವೇದಿಕೆಯನ್ನು ರಚಿಸಲಾಗಿದೆ. ಯುವ ಪದವೀಧರರು ಹಾಗೂ ನಿರುದ್ಯೋಗಿಗಳು ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಗಣೇಶ ಬಿಷ್ಟಣ್ಣನವರ, ಶಂಕರ ಮೆಹರವಾಡೆ, ಬಾಬುಸಾಬ ಮೋಮಿನಗಾರ, ಈರಣ್ಣ ಚೌಡಣ್ಣನವರ, ಸಂತೋಷ ಬಾಸೂರ, ಇತರರಿದ್ದರು.