

ನವದೆಹಲಿ: ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ನಡೆಸಲು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸುವಂತೆ ಮಸೀದಿ ನಿರ್ವಹಣಾ ಸಮಿತಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮಸೀದಿ ಸ್ಥಳದಲ್ಲಿ ಮೊದಲು ದೇವಾ ಲಯವಿತ್ತು ಎಂಬ ಹಿಂದೂ ಅರ್ಜಿದಾರರ ವಾದದ ಆಧಾರದ ಮೇಲೆ ಮಸೀದಿಯಲ್ಲಿ ಸಮೀಕ್ಷೆ ನಡೆಸಬೇಕೆಂದು ವಿಚಾರಣಾ ನ್ಯಾಯಾಲಯ ಸೂಚಿಸಿತ್ತು. ಇದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ವೇಳೆ, ಶಾಂತಿ-ಸೌಹಾರ್ದತೆ ಯನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದ ಸಿಜೆಐ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠ, ಹೈಕೋರ್ಟ್ನಲ್ಲಿ ವಿಚಾರಣೆಗೆ ಅವಕಾಶ ಸಿಗುವ ತನಕ ವಿಚಾರಣಾ ನ್ಯಾಯಾಲಯದ ಯಾವುದೇ ಮುಂದಿನ ಕ್ರಮಗಳಿಗೆ ಆದೇಶಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿತು. ಶಾಂತಿ-ಸೌಹಾರ್ದತೆಯನ್ನು ಸರ್ಕಾರ ಖಾತರಿಪಡಿಸಿಕೊಳ್ಳಬೇಕು. ಮಸೀದಿ ಸಮಿತಿ ಸಲ್ಲಿಸಿರುವ ಈ ಅರ್ಜಿ ನಮ್ಮ ಮುಂದೆಯೂ ಇರಲಿದೆ. ಏನೂ ಅಹಿತಕರ ನಡೆಯಬಾರದು ಎನ್ನುವುದು ನಮ್ಮ ಆಶಯ. ನಾವು ಸಂಪೂರ್ಣವಾಗಿ ತಟಸ್ಥರಾಗಿರಲಿದ್ದೇವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತಿಳಿಸಿದರು.
ಮಸೀದಿ ಆಡಳಿತ ಸಮಿತಿ ಸಲ್ಲಿಸಲಿರುವ ಅರ್ಜಿಯನ್ನು ಸಲ್ಲಿಸಿದ ಮೂರು ದಿನಗಳೊಳಗೆ ವಿಚಾರಣೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಜನವರಿ 8ಕ್ಕೆ ನಿಗದಿಯಾಗಿರುವ ವಿಚಾರಣಾ ನ್ಯಾಯಾಲಯದ ವಿಚಾರಣೆಯು ಹೈಕೋರ್ಟ್ ಪ್ರಕರಣವನ್ನು ಪರಿಶೀಲಿಸುವವರೆಗೆ ಮುಂದುವರಿ ಯುವುದಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಡ್ವೊಕೇಟ್ ಕಮಿಷನರ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್, ಸದ್ಯಕ್ಕೆ ಅದನ್ನು ತೆರೆಯ ಬಾರದು ಎಂದೂ ತಿಳಿಸಿತು.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಸಂಭಾಲ್ನಲ್ಲಿ ಸಂಘರ್ಷಗಳು ನಡೆದಿದ್ದವು. ಮಸೀದಿಯ ಸಮೀಕ್ಷೆಗೆ ವಿರೋಧಿಸಿದ್ದ ಕೆಲ ಸ್ಥಳೀಯರು, ಪೊಲೀಸರ ಜತೆಗೆ ಹಿಂಸಾತ್ಮಕ ಘರ್ಷಣೆಗಿಳಿದಿದ್ದರು. ಇದು ಹಲವರ ಸಾವಿಗೂ ಕಾರಣವಾಗಿತ್ತು. ಉತ್ತರ ಪ್ರದೇಶ ಸರ್ಕಾರ ಗಲಭೆಗಳ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ತನಿಖಾ ಆಯೋಗ ಘೊಷಿಸಿತು. ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಲಾಗಿತ್ತು. ಸಂಭಾಲ್ನ ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರಹಮಾನ್ ಬಾರ್ಕ್ ಅವರು ಸುಪ್ರೀಂಕೋರ್ಟ್ನ ಆದೇಶ ಸ್ವಾಗತಿಸಿದ್ದು, ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ನಿರ್ಣಾಯಕ ಹೆಜ್ಜೆ ಎಂದಿದ್ದಾರೆ. ಈ ನಿರ್ಧಾರ ಕೈಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಸಂಭಾಲ್ ಘಟನೆಯನ್ನು ಸುಪ್ರೀಂಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದ ಆಯೋಗದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾವು ಶೀಘ್ರದಲ್ಲೇ ಹೊಸ ಅರ್ಜಿ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮಥುರಾ ವಿವಾದ ಡಿ.9ಕ್ಕೆ ವಿಚಾರಣೆ: ಮಥುರಾದ ಕೃಷ್ಣ ಜನ್ಮಭೂಮಿ-ಷಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿ ಹಿಂದು ಪಕ್ಷಗಾರರು ಸಲ್ಲಿಸಿರುವ 18 ಪ್ರಕರಣಗಳ ಸಿಂಧುತ್ವ ಪ್ರಶ್ನಿಸಿದ ಅರ್ಜಿಯನ್ನು ಅಲಹಾಬಾದ್ ಹೈ ಕೋರ್ಟ್ ತಿರಸ್ಕರಿಸಿದ್ದರ ವಿರುದ್ಧ ಷಾಹಿ ಈದ್ಗಾ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಡಿಸೆಂಬರ್ 9ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಅರ್ಜಿಯ ವಿಸ್ತ್ರತ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಇದ್ದ ಪೀಠ ಹೇಳಿದೆ. ಹೈ ಕೋರ್ಟ್ನ ಏಕ ಸದಸ್ಯ ಪೀಠ ಆಗಸ್ಟ್ 1ರಂದು ಹೊರಡಿಸಿದ್ದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲಾಗಿದೆಯೆಂದು ಮೇಲ್ನೋಟಕ್ಕೆ ಗೊತ್ತಾಗಿರುವುದಾಗಿ ಪೀಠದ ಪರವಾಗಿ ಸಿಜೆಐ ಖನ್ನಾ ಹೇಳಿದರು.
ತಿರುಪತಿ ಲಡ್ಡು ಕೇಸ್ ತನಿಖೆ ಆರಂಭ: ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ಸಿಪಿ ಆಡಳಿತಾವಧಿಯಲ್ಲಿ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಿದ ಆರೋಪದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಐವರು ಸದಸ್ಯರ ವಿಶೇಷ ತಂಡ (ಎಸ್ಐಟಿ) ತನಿಖೆ ಆರಂಭಿಸಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಸ್ಐಟಿ ರಚನೆ ಮಾಡಲಾಗಿತ್ತು. ಹಿಂದಿನ ಸರ್ಕಾರದ ಆಡಳಿತದಲ್ಲಿ ತುಪ್ಪ ಸಂಗ್ರಹಣೆ ಮತ್ತು ಗುಣಮಟ್ಟ, ಸರಕುಗಳನ್ನು ಸ್ವೀಕರಿಸುವ ಪ್ರಕ್ರಿಯೆಗೆ ಸಂಬಂಧಿಸಿದ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ದಾಖಲೆ ಎಸ್ಐಟಿ ಪರಿಶೀಲಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಾದ ಗುಣಮಟ್ಟ ಅರ್ಜಿ ಸುಪ್ರೀಂ ಕೋರ್ಟ್ ನಕಾರ: ದೇವಸ್ಥಾನಗಳಲ್ಲಿ ವಿತರಿಸುವ ‘ಪ್ರಸಾದ’ದ ಗುಣಮಟ್ಟದ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸುವಂತೆ ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದು ರಾಜ್ಯಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ. ಕಾರ್ಯಾಂಗ ತನ್ನ ಮಿತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಸರ್ಕಾರ ಹೇಳಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯ್ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ, ಅರ್ಜಿದಾರರ ವಕೀಲರಿಗೆ ತಿಳಿಸಿತು. ನಾನಾ ದೇವಸ್ಥಾನಗಳಲ್ಲಿ ಪ್ರಸಾದ ತಿಂದವರು ಅಸ್ವಸ್ಥರಾಗುತ್ತಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ ಎಂದು ಅರ್ಜಿದರರ ವಕೀಲರು ಹೇಳಿದರು.