

ಆಂಧ್ರಪ್ರದೇಶ: ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ 'ಪುಷ್ಪ 2' ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಈ ಹಿಂದೆ ಚಿತ್ರದ ವಿಶೇಷ ಹಾಡೊಂದಕ್ಕೆ ನಟಿಯ ಹುಡುಕಾಟವನ್ನು ಚಿತ್ರತಂಡ ನಡೆಸಿತ್ತು. ಆದ್ರೆ, ಸೂಕ್ತ ನಟಿ ಸಿಗುತ್ತಿರಲಿಲ್ಲ. ಸದ್ಯ ಇತ್ತೀಚಿನ ವದಂತಿಗಳ ಪ್ರಕಾರ, ಈ ಸಿನಿಮಾದ ಸ್ಪೆಷಲ್ ಸಾಂಗ್ನಲ್ಲಿ ನಟಿ ಸಮಂತಾ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಒಂದು ವಿಶೇಷ ಹಾಡಿದ್ದು, ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಎದುರು ನೋಡುತ್ತಿದೆ. ಈ ಹಿಂದೆ 'ಪುಷ್ಪ ದಿ ರೈಸ್' ಭಾಗದಲ್ಲಿದ್ದ 'ಹು ಅಂಟವಾ ಉಹೂ ಅಂಟವಾ' ಹಾಡಿನಲ್ಲಿ ಸಮಂತಾ ಅದ್ದೂರಿಯಾಗಿ ಕಾಣಿಸಿಕೊಂಡಿದ್ದರು. ಈ ಹಾಡು ಪಡ್ಡೆ ಹುಡಗರ ನಿದ್ದೆಗೆಡಿಸಿದ್ದಲ್ಲದೇ, ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
ಇದೀಗ ಚಿತ್ರ ತಯಾರಕರು ಪುಷ್ಪ 2 ಚಿತ್ರದ ವಿಶೇಷ ಹಾಡಿಗೆ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಪುಷ್ಪ 1ರ ಹಾಡನ್ನು ಮೆಗಾ ಹಿಟ್ ಮಾಡಿದಂತೆ ಸಮಂತಾ ಈ ಸಾಂಗ್ನ ಕೂಡ ಸಕ್ಸಸ್ ಮಾಡುತ್ತಾರೆ ಎಂಬುದು ನಿರ್ದೇಶಕರ ಲೆಕ್ಕಾಚಾರವಿರಬಹುದು.
ಇತ್ತೀಚಿನ ವದಂತಿಗಳ ಪ್ರಕಾರ, ನಟಿ ಸಮಂತಾ 'ಪುಷ್ಪ 2' ಸಿನಿಮಾದ ವಿಶೇಷ ಸಾಂಗ್ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಹಾಡಿನಲ್ಲಿ ಅಲ್ಲು ಅರ್ಜುನ್ ಜತೆಗೆ ಹೆಜ್ಜೆ ಹಾಕುವುದು ಖಚಿತ ಎನ್ನಲಾಗಿದೆ. ಈ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಈ ಕುರಿತಂತೆ ಇಲ್ಲಿಯವರೆಗೂ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ,(ಏಜೆನ್ಸೀಸ್).