ಎಚ್ಚರಿಕೆಯಿಂದಿರಿ.. ಇಲ್ಲದಿದ್ದರೆ ಮುಂದಿನವರು ನೀವೇ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಿಂದ ಎಸ್‌ಪಿ ನಾಯಕಿಗೆ ಬೆದರಿಕೆ ಕರೆ | Lawrence Bishnoi

Untitled design - 2025-03-30T151717.456
Published on

ನವದೆಹಲಿ: ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ತಾರಿಕ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್(Lawrence Bishnoi) ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ. ತಾರಿಕ್ ಖಾನ್ ಅವರ ಫೋನ್‌ಗೆ ಎರಡು ದಿನಗಳ ಹಿಂದೆ ಒಂದು ಕರೆ ಬಂದಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ, ಮಿತಿಯೊಳಗೆ ಇರುವಂತೆ ಎಚ್ಚರಿಸಿದ್ದಾಗಿ ತಾರಿಕ್ ಖಾನ್ ಹೇಳಿಕೊಂಡಿದ್ದಾರೆ. ಈ ಘಟನೆ ಭಾರೀ ಸಂಚಲನ ಮೂಡಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಆಡಿಯೋ ಕ್ಲಿಪ್​ನಲ್ಲಿ ತಾರಿಕ್ ಖಾನ್ ವಿರುದ್ಧ ನಿಂದನೀಯ ಮತ್ತು ಬೆದರಿಕೆಯ ಭಾಷೆಯನ್ನು ಬಳಸಲಾಗಿದೆ. ಆಡಿಯೋ ಕ್ಲಿಪ್‌ನಲ್ಲಿ, ಎಚ್ಚರಿಕೆಯಿಂದಿರಿ ಇಲ್ಲದಿದ್ದರೆ ನಿಮ್ಮ ಸಂಖ್ಯೆ ಬರುತ್ತದೆ. ಎಚ್ಚರಿಕೆಯಿಂದ ಮಾತನಾಡಿ ಎಂದು ಬೆದರಿಕೆ ಹಾಕಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ತಾರಿಕ್ ಖಾನ್ ಹೇಳಿದ್ದೇನು?

ಕಳೆದ ಎರಡು ತಿಂಗಳಿನಿಂದ ನನಗೆ ನಿಂದನೀಯ ಮತ್ತು ಬೆದರಿಕೆ ಕರೆಗಳು ಬರುತ್ತಿವೆ. ಆದರೆ ನಾನು ಅವುಗಳನ್ನು ನಿರ್ಲಕ್ಷಿಸಿದೆ. ಆದರೆ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿ ನಿಂದಿಸಿದ್ದಾನೆ. ಅಲ್ಲದೆ ಈ ಬಾರಿ ಬೆದರಿಕೆ ಹಾಕಿದ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪರವಾಗಿ ಮಾತನಾಡುವುದಾಗಿ ಹೇಳಿಕೊಂಡಿದ್ದಾನೆ. ಆದ್ದರಿಂದ ಈ ಬೆದರಿಕೆಯ ಗಂಭೀರತೆಯನ್ನು ಪರಿಗಣಿಸಿ ನಾನು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದು ವದಂತಿಯಾಗಿರಬಹುದು ಎಂದು ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಆದರೆ ಕರೆ ಮಾಡಿದವರನ್ನು ಗುರುತಿಸಿ ಬಂಧಿಸುವುದು ಅಗತ್ಯ. ಇತ್ತೀಚಿನ ಸಂಭಾಷಣೆ ಮತ್ತು ಹಿಂದಿನ ಘಟನೆಗಳ ರೆಕಾರ್ಡಿಂಗ್ ಅನ್ನು ನಾನು ಪೊಲೀಸರಿಗೆ ನೀಡಿದ್ದೇನೆ ಎಂದು ತಾರಿಕ್ ಖಾನ್ ಹೇಳಿದರು.

ಪೊಲೀಸರು ತಿಳಿಸಿದ್ದೇನು?

ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ರಮಾನಂದ ಪ್ರಸಾದ್, ಈ ಕರೆ ನಿಜವಾಗಿಯೂ ಬಿಷ್ಣೋಯ್ ಗ್ಯಾಂಗ್‌ನಿಂದ ಬಂದಿದೆಯೇ ಅಥವಾ ವಂಚನೆಯೇ? ಇದು ಇನ್ನೂ ದೃಢಪಟ್ಟಿಲ್ಲ. ಆದರೆ ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕರೆ ಮಾಡಿದವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ತನಿಖೆ ನಡೆಸಲು ಉಪಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net