ತಿರುವನಂತಪುರಂ: ಸೂಪರ್‌ಸ್ಟಾರ್ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಎಲ್ 2 ಎಂಪುರಾನ್’ ಸಿನಿಮಾ ದೇಶದ ರಾಜಕೀಯವನ್ನು ಬಿಸಿ ಮಾಡಿದೆ. ಏತನ್ಮಧ್ಯೆ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್(Rajeev Chandrasekhar) ಕೂಡ ಭಾನುವಾರ(ಮಾರ್ಚ್ 30) ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೋಹನ್ ಲಾಲ್ ಅವರ ‘ಎಲ್ 2: ಎಂಪುರಾನ್’ ಚಿತ್ರವನ್ನು ತಾವು ನೋಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ‘ಸಿಕಂದರ್’ ಮೊದಲ ದಿನಕ್ಕಿಂತ ಎರಡು & ಮೂರನೇ ದಿನ ಹೆಚ್ಚು ಗಳಿಸುವ ನಿರೀಕ್ಷೆ; ಇಲ್ಲಿದೆ ಅದರ ಹಿಂದಿನ ಕಾರಣ | Sikandar
ಸತ್ಯವನ್ನು ತಿರುಚುವ ಕಥೆಯನ್ನು ಸೃಷ್ಟಿಸಲು ಪ್ರಯತ್ನಿಸುವ ಯಾವುದೇ ಸಿನಿಮಾವಾದರೂ ವಿಫಲಗೊಳ್ಳುತ್ತದೆ ಎಂದು ಅವರು ಹೇಳಿದರು. ಈ ರೀತಿಯ ಚಲನಚಿತ್ರ ನಿರ್ಮಾಣದಿಂದ ನಿರಾಶೆಗೊಂಡಿದ್ದೇನೆ ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ‘ಎಂಪುರಾನ್’ ಚಿತ್ರದ ಕೆಲವು ಭಾಗಗಳ ವಿರುದ್ಧ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರು ಟೀಕೆಗಳನ್ನು ತೀವ್ರಗೊಳಿಸಿರುವ ಸಮಯದಲ್ಲಿ ರಾಜೀವ್ ಚಂದ್ರಶೇಖರ್ ಅವರ ಈ ಹೇಳಿಕೆ ಬಂದಿದೆ. ಈ ಚಿತ್ರ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾನು ‘ಲೂಸಿಫರ್’ ಚಿತ್ರವನ್ನು ನೋಡಿದ್ದೆ ಮತ್ತು ಅದು ನನಗೆ ಇಷ್ಟವಾಯಿತು. ‘ಎಂಪುರಾನ್’ ಚಿತ್ರ ‘ಲೂಸಿಫರ್’ ಚಿತ್ರದ ಮುಂದುವರಿದ ಭಾಗ ಎಂದು ಕೇಳಿದಾಗ ನಾನು ಅದನ್ನು ನೋಡುತ್ತೇನೆ ಎಂದು ಹೇಳಿದೆ. ಈ ಹಿಂದೆ ನಾನು ಬಿಜೆಪಿ ನಾಯಕ ಎಂ ಟಿ ರಮೇಶ್ ಅವರ ಹೇಳಿಕೆಯನ್ನು ಬೆಂಬಲಿಸಿ ಚಿತ್ರವನ್ನು ಸಿನಿಮಾದಂತೆ ನೋಡಬೇಕು ಎಂದು ಹೇಳಿದ್ದೆ. ಆದರೆ ಚಿತ್ರದ ನಿರ್ಮಾಪಕರೇ ಚಿತ್ರದಲ್ಲಿ 17 ಬದಲಾವಣೆಗಳನ್ನು ಮಾಡಿದ್ದಾರೆ ಮತ್ತು ಈಗ ಚಿತ್ರದ ಮೇಲೆ ಸೆನ್ಸಾರ್‌ಶಿಪ್ ಕೂಡ ಹೇರಲಾಗುತ್ತಿದೆ ಎಂಬ ಮಾಹಿತಿ ತನಗೆ ಬಂದಿದೆ. ಈ ಚಿತ್ರವು ಮೋಹನ್ ಲಾಲ್ ಅಭಿಮಾನಿಗಳು ಮತ್ತು ಇತರ ಪ್ರೇಕ್ಷಕರನ್ನು ಕಾಡುತ್ತಿರುವ ಕೆಲವು ವಿಷಯಗಳನ್ನು ಹೊಂದಿದೆ ಎಂದು ಚಂದ್ರಶೇಖರ್ ತಾವು ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
L2: ಎಂಪೂರನ್ ಬಗ್ಗೆ ವಿವಾದ ಏಕೆ?
ನಿರ್ದೇಶಕ ಪೃಥ್ವಿರಾಜ್ ಮತ್ತು ನಟ ಮೋಹನ್ ಲಾಲ್ ಅವರ ತಂಡವು ನಿರ್ಮಿಸಿದ ‘ಲೂಸಿಫರ್’ ಚಿತ್ರದ ಎರಡನೇ ಭಾಗವಾದ ‘ಎಲ್ 2: ಎಂಪುರಾನ್’ ಚಿತ್ರವು ಬಲಪಂಥೀಯ ರಾಜಕೀಯದ ಟೀಕೆ ಮತ್ತು ಗುಜರಾತ್ ಗಲಭೆಗಳ ಉಲ್ಲೇಖಕ್ಕಾಗಿ ಈಗ ಚರ್ಚೆಯ ವಿಷಯವಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಸಂಘ ಪರಿವಾರವು ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಎಡಪಂಥೀಯ ಸಂಘಟನೆಗಳು ಬಲಪಂಥೀಯ ರಾಜಕೀಯವನ್ನು ಖಳನಾಯಕನಂತೆ ಚಿತ್ರಿಸಿದ್ದಕ್ಕಾಗಿ ಚಿತ್ರವನ್ನು ಹೊಗಳಿದವು.
ಈ ಸಿನಿಮಾದ ಚಿತ್ರಕಥೆಗಾರ ಮುರಳಿ ಗೋಪಿ ವಿವಾದವನ್ನು ತಳ್ಳಿಹಾಕಿದರು. ಈ ವಿವಾದದ ಬಗ್ಗೆ ನಾನು ಸಂಪೂರ್ಣವಾಗಿ ಮೌನವಾಗಿರುತ್ತೇನೆ ಎಂದು ಅವರು ಹೇಳಿದರು. ಅವರು ಹೋರಾಡಲಿ. ಪ್ರತಿಯೊಬ್ಬರಿಗೂ ತಮ್ಮದೇ ಆದ ರೀತಿಯಲ್ಲಿ ಚಿತ್ರವನ್ನು ಅರ್ಥೈಸಿಕೊಳ್ಳುವ ಹಕ್ಕಿದೆ. ಈ ಚಿತ್ರವು ದೇಶದ ಸಾಮಾಜಿಕ ಮತ್ತು ರಾಜಕೀಯ ವಾತಾವರಣವನ್ನು ಎತ್ತಿ ತೋರಿಸುತ್ತದೆ. ಕೆಲವರು ಇದರ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಕೆಲವರು ಅದನ್ನು ಒಪ್ಪಿಕೊಂಡಿದ್ದಾರೆ. ಅವರು ಅದನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಳ್ಳಲಿ ನಾನು ಮೌನವಾಗಿರುತ್ತೇನೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)