ವಿವಸ್ತ್ರಗೊಳಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ: ಸಮಾಜವಾದಿ ಪಕ್ಷದ ನಾಯಕ ಅರೆಸ್ಟ್​

SP Leader
Published on

ಲಖನೌ: ಹದಿನೈದು ವರ್ಷದ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ನವಾಬ್​​ ಸಿಂಗ್​ ಯಾದವ್​ರನ್ನು ಬಂಧಿಸಲಾಗಿದೆ.

ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ 112 ಸಹಾಯವಾಣಿಗೆ ಬಂದ ಕರೆಯನ್ನು ಸ್ವೀಕರಿಸಿದಾಗ ಹುಡುಗಿಯೊಬ್ಬಳು ಮಾತನಾಡಿದಳು. ತನ್ನನ್ನು ವಿವಸ್ತ್ರಗೊಳಿಸಿ, ದೌರ್ಜನ್ಯ ನಡೆಸಲು ಯತ್ನಿಸಲಾಗಿದೆ ಎಂದು ಆರೋಪಿಸಿದಳು. ತಕ್ಷಣ ಹುಡುಗಿ ಹೇಳಿದ ಸ್ಥಳಕ್ಕೆ ತೆರಳಿದ ಪೊಲೀಸರು ಆಕೆಯನ್ನು ರಕ್ಷಣೆ ಮಾಡಿ, ಆರೋಪಿ ನವಾಬ್​ ಸಿಂಗ್​ ಯಾದವ್​ರನ್ನು ಬಂಧಿಸಿದ್ದಾರೆ ಎಂದು ಉತ್ತರ ಪ್ರದೇಶದ ಕನೌಜ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮಿತ್​ ಕುಮಾರ್​ ಹೇಳಿದರು.

ಉದ್ಯೋಗದ ಅವಕಾಶಕ್ಕಾಗಿ ನನ್ನ ಚಿಕ್ಕಮ್ಮ (ತಂದೆಯ ಸಂಬಂಧಿ) ನನ್ನನ್ನು ಯಾದವ್​ ಮನೆಗೆ ಕರೆದೊಯ್ದಳು ಎಂದು ಅಪ್ರಾಪ್ತೆ ಆರೋಪಿಸಿದ್ದಾಳೆ. ಯಾದವ್​ ಮತ್ತು ಅಪ್ರಾಪ್ತೆಯ ಚಿಕ್ಕಮ್ಮನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್​)ಯ ವಿವಿಧ ಕಾಯ್ದೆ ಮತ್ತು ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಬಂಧಿತ ನವಾಬ್​ ಸಿಂಗ್​ ಯಾದವ್​ ತನ್ನ ಬಂಧನವನ್ನು ಒಂದು ಷಡ್ಯಂತ್ರ ಎಂದು ಕರೆದಿದ್ದಾನೆ. ಆದರೆ, ಇದನ್ನು ಸಂತ್ರಸ್ತೆ ನಿರಾಕರಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದಾಗಿ ಮತ್ತು ಈ ಅನ್ಯಾಯದ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ದೃಢವಾಗಿರುತ್ತೇವೆ ಎಂದು ಹೇಳಿದ್ದಾಳೆ. ಇದೇ ಸಂದರ್ಭದಲ್ಲಿ ನ್ಯಾಯಾಲಯ ಯಾದವ್​ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಯಾದವ್​ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ಆ ಬಗ್ಗೆ ಪ್ರತಿಕ್ರಿಯಿಸದೇ ಸಮಾಜವಾದಿ ಪಾರ್ಟಿ ಅಂತರ ಕಾಯ್ದುಕೊಂಡಿದೆ. ಯಾವದ್​ಗೂ ಸಮಾಜವಾದಿ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕನೌಜ್ ಜಿಲ್ಲಾಧ್ಯಕ್ಷ ಕಲೀಂ ಖಾನ್ ಹೇಳಿದ್ದಾರೆ.

ಅಡ್ಂಗಪುರ ನಿವಾಸಿ ಚಂದನ್ ಸಿಂಗ್ ಯಾದವ್ ಅವರ ಪುತ್ರ ನವಾಬ್ ಸಿಂಗ್ ಯಾದವ್, ಸಮಾಜವಾದಿ ಪಕ್ಷದ ಸದಸ್ಯರಲ್ಲ. ಅವರ ಹೆಸರನ್ನು ಪಕ್ಷದೊಂದಿಗೆ ತಳುಕು ಸರಿಯಲ್ಲ. ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆ ಅವರನ್ನು ಪಕ್ಷದಿಂದ ಹೊರಗಿಟ್ಟಿದ್ದು, ವರ್ಷಗಳಿಂದ ನಮ್ಮೊಂದಿಗೆ ಅವರು ಸಂಪರ್ಕ ಹೊಂದಿಲ್ಲ ಎಂದು ಸಮಾಜವಾದಿ ಪಕ್ಷದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ಪಕ್ಷವು ತನ್ನ ನಾಯಕರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು. ನವಾಬ್ ಸಿಂಗ್ ಯಾದವ್ ಕೇವಲ ಸಮಾಜವಾದಿ ಪಕ್ಷ ನಾಯಕರಲ್ಲ, ಅವರು ಸಂಸದ ಡಿಂಪಲ್ ಯಾದವ್ ಅವರ ಪ್ರತಿನಿಧಿಯಾಗಿದ್ದಾರೆ. ಸಮಾಜವಾದಿ ಪಕ್ಷದ ನೀತಿ ಅಡಿಯಲ್ಲಿ ಹುಡುಗರು ಹುಡುಗರಾಗುತ್ತಾರೆ. ಇಂತಹ ಪ್ರಕರಣಗಳನ್ನು ಸುಲಭವಾಗಿ ಮುಚ್ಚಿಹಾಕುತ್ತಾರೆ. ಅಯೋಧ್ಯೆಯ ಮೊಯಿದ್ ಖಾನ್ ಪ್ರಕರಣ ಮುಚ್ಚಿಹಾಕಿದ್ದರು. ಇದೀಗ ಕನೌಜ್‌ನ ನವಾಬ್ ಸಿಂಗ್ ಯಾದವ್ ಅವರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ತ್ರಿಪಾಠಿ ದೂರಿದ್ದಾರೆ.

ಅಂದಹಾಗೆ ನವಾಬ್ ಸಿಂಗ್ ವಿರುದ್ಧ ಕನೌಜ್ ನಗರ ಪೊಲೀಸ್ ಠಾಣೆ ಮತ್ತು ತಿರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಗೂಂಡಾ ಕಾಯ್ದೆಯಡಿ ಇತರ ಮೂರು ಪ್ರಕರಣಗಳು ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net