

ಹೈದರಾಬಾದ್: ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡಿಗರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ರಶ್ಮಿಕಾ ಮೂಲವೇ ಕರ್ನಾಟಕ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ, ವೃತ್ತಿ ಜೀವನದಲ್ಲಿ ಯಶಸ್ವಿ ನಾಯಕಿಯಾಗಿ ಮುಂದುವರೆದಿದ್ದಾರೆ. ಹಲವು ಅದ್ಭುತ ಚಿತ್ರಗಳನ್ನು ಮಾಡಿರುವ ಸೌತ್ ಬ್ಯೂಟಿ, ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಾಯಕಿಯಾದರು. ಈಗ ಪುಷ್ಪ-2 ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.
ರಶ್ಮಿಕಾಗೆ ಈ ಯಶಸ್ಸು ಸುಮ್ಮನೇ ಬಂದಿಲ್ಲ. ಯಶಸ್ಸಿನ ಹಿಂದೆ ಸಾಕಷ್ಟು ನೋವು ಮತ್ತು ಅವಮಾನಗಳನ್ನು ಎದುರಿಸಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನದಲ್ಲಿ ಈ ವಿಚಾರಗಳನ್ನು ರಶ್ಮಿಕಾ ಬಹಿರಂಗಪಡಿಸಿದ್ದಾರೆ. ಪ್ರತಿ ದಿನ ಅಳುತ್ತಾ ಮನೆಗೆ ಬರುತ್ತಿದ್ದೆ ಎಂದು ರಶ್ಮಿಕಾ ಹೇಳಿರುವ ಮಾತು ಇದೀಗ ವೈರಲ್ ಆಗಿದೆ.
ಚಿತ್ರೋದ್ಯಮಕ್ಕೆ ಬಣ್ಣದ ಲೋಕ ಎಂಬ ಇನ್ನೊಂದು ಹೆಸರಿರುವುದು ಎಲ್ಲರಿಗು ಗೊತ್ತಿದೆ. ಈ ಲೋಕದಲ್ಲಿ ತಮ್ಮ ಹೆಸರಿನ ಮುದ್ರೆ ಒತ್ತಲು ಕಲಾವಿದರು ಸಾಕಷ್ಟು ಸರ್ಕಸ್ ಮಾಡುತ್ತಾರೆ. ನಾಯಕನಾಗಲಿ, ನಾಯಕಿಯಾಗಲಿ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅವಕಾಶಗಳು ಸುಲಭವಾಗಿ ಬರುವುದಿಲ್ಲ. ಅದಕ್ಕಾಗಿ ಪ್ರತಿನಿತ್ಯ ಹೋರಾಟ ನಡೆಸಬೇಕು. ಈಗ ಸ್ಟಾರ್ ಪಟ್ಟ ಪಡೆದುಕೊಂಡಿರುವ ಸುದೀಪ್ ಹಾಗೂ ಯಶ್ ಅವರಂತಹ ನಟರು ಒಂದು ಕಾಲದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದಾರೆ ಮತ್ತು ಅವಮಾನಗಳನ್ನು ಎದುರಿಸಿದ್ದಾರೆ. ಈ ವಿಚಾರದಲ್ಲಿ ರಶ್ಮಿಕಾ ಕೂಡ ಹೊರತಾಗಿಲ್ಲ. ತನಗೂ ಈ ಸ್ಟಾರ್ ಹೀರೋಯಿನ್ ಸ್ಥಾನಮಾನ ಮತ್ತು ಸಿನಿಮಾ ಅವಕಾಶಗಳು ಅಷ್ಟು ಸುಲಭವಾಗಿ ಸಿಗಲಿಲ್ಲ ಎಂದು ಸ್ವತಃ ರಶ್ಮಿಕಾ ಹೇಳಿದ್ದಾರೆ. ಸಿನಿಮಾ ಆಡಿಷನ್ ಸಮಯದಲ್ಲಿ ತಾನು ಎದುರಿಸಿದ ಕೆಲವು ಕೆಟ್ಟ ಘಟನೆಗಳು ಮತ್ತು ಸನ್ನಿವೇಶಗಳ ಬಗ್ಗೆ ಸಂದರ್ಶನದಲ್ಲಿ ವಿವರಿಸಿದ್ದಾರೆ.
ನಾನು ಆಗಾಗ ಆಡಿಷನ್ಗೆ ಹೋಗುತ್ತಿದ್ದೆ. ಆಡಿಷನ್ನಲ್ಲಿ ಕೆಲವರು ನನ್ನ ಮುಖವನ್ನು ಅವಮಾನಿಸುತ್ತಿದ್ದರು. ಇದು ನಟನೆಗೆ ಸರಿಯಾದ ಮುಖವೇ ಎಂದು ಹೀಯಾಳಿಸುತ್ತಿದ್ದರು. ಪ್ರತಿ ಬಾರಿ ಆಡಿಷನ್ಗೆ ಹೋದಾಗಲೂ ನಾನು ಅಳುತ್ತಾ ಮನೆಗೆ ವಾಪಸ್ಸಾಗುತ್ತಿದೆ. ಒಮ್ಮೆ ನಾನು ಒಂದು ಚಿತ್ರಕ್ಕಾಗಿ ಪದೇಪದೆ ಆಡಿಷನ್ ಮಾಡಿದ್ದೇನೆ. ಆ ಸಿನಿಮಾಗಾಗಿ 3 ತಿಂಗಳ ಕಾಲ ವರ್ಕ್ಶಾಪ್ ನಡೆಸಿದರು. ಆದರೆ, ಕೆಲವು ದಿನಗಳ ನಂತರ ಆ ಸಿನಿಮಾ ರದ್ದಾಯಿತು. ಸುಮಾರು 25 ಆಡಿಷನ್ಗಳಲ್ಲಿ ನಾನು ತಿರಸ್ಕರಿಸಲ್ಪಟ್ಟೆ. ಕೊನೆಗೆ ಒಂದು ಸಿನಿಮಾಗೆ ನಾನು ಆಯ್ಕೆಯಾದೆ. ನನ್ನ ವೃತ್ತಿ ಜೀವನದಲ್ಲಿ ಇಂತಹ ಹಲವು ಸವಾಲುಗಳನ್ನು ನಾನು ಎದುರಿಸಿದ್ದೇನೆ ಎಂದು ರಶ್ಮಿಕಾ ಹೇಳಿದರು.
ಆಡಿಷನ್ ಸಮಯದಲ್ಲಿ ನನ್ನ ನಟನಾ ಕೌಶಲ್ಯವನ್ನು ಅನುಮಾನಿಸುತ್ತಿದ್ದರು. ಆದರೆ, ನನ್ನ ವೃತ್ತಿಜೀವನದಲ್ಲಿ ನಾನಿಂದು ಎಲ್ಲಿಯೂ ಹಿಂತಿರುಗಲಿಲ್ಲ. ನಾನು ಮಾಡಿದ ಪ್ರತಿಯೊಂದು ಚಿತ್ರ ಮತ್ತು ಪ್ರತಿ ಪಾತ್ರಕ್ಕೂ ನನ್ನನ್ನು ನಾನು ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳನ್ನು ನೋಡಿದಾಗಲೆಲ್ಲ ಇನ್ನೂ ಚೆನ್ನಾಗಿ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಅನಿಸುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಪುಷ್ಪ-2 ಬಿಟ್ಟರೆ ರಶ್ಮಿಕಾ ಕೈಯಲ್ಲಿ ಅನೇಕ ಪ್ಯಾನ್ ಇಂಡಿಯಾ ಸಿನಿಮಾಗಳಿವೆ. ಛವ್ವಾ ಸಿನಿಮಾದಲ್ಲಿ ವಿಕ್ಕಿ ಕುಶಾಲ್ ಜತೆ, ಸಿಕಂದರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜತೆ ನಟಿಸಲಿದ್ದಾರೆ. ಇದಿಷ್ಟೇ ಅಲ್ಲದೆ, ಧನುಷ್ ನಟನೆಯ ಕುಬೇರ ಸಿನಿಮಾದಲ್ಲೂ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್)