ಆಲ್ಟೊ ಕಾರು ಗಿಫ್ಟ್​ ನೀಡಿ ಚಿನ್ನದ ಹುಡುಗ ನದೀಮ್​ಗೆ ಅವಮಾನ! ಪಾಕಿಸ್ತಾನದಲ್ಲಿ ವ್ಯಕ್ತವಾಯ್ತು ಭಾರಿ ಆಕ್ರೋಶ

Arshad Nadeem
Published on

ನವದೆಹಲಿ: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. 100 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಸಾಧನೆಯಿಂದ ಇಡೀ ಪಾಕಿಸ್ತಾನವೇ ಅರ್ಷದ್ ನದೀಮ್​ರನ್ನು ಕೊಂಡಾಡುತ್ತಿದೆ. ಅಲ್ಲದೆ, ಭರ್ಜರಿ ಸ್ವಾಗತವನ್ನು ಸಹ ಕೋರಿದೆ.

ತಾಜಾ ಸಂಗತಿ ಏನೆಂದರೆ, ನದೀಮ್​ಗೆ ಪಾಕಿಸ್ತಾನದ ಸಿನಿಮಾ ತಾರೆಯರು, ಕ್ರಿಕೆಟರ್ಸ್, ಉದ್ಯಮಿಗಳು ಮತ್ತು ರಾಜಕಾರಣಿಗಳು ನದೀಮ್​ಗೆ ಉಡುಗೊರೆ ನೀಡಲು ಮುಂದೆ ಬರುತ್ತಿದ್ದಾರೆ. ಅಲ್ಲದೆ, ನದೀಮ್​ ಸಾಧನೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಈಗಾಗಲೇ ನದೀಮ್​ ಸಾಕಷ್ಟು ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ. ಅವರ ಮಾವ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ನದೀಮ್​ ಅವರ ಗ್ರಾಮದಲ್ಲಿ ಎಮ್ಮೆಯನ್ನು ಗಿಫ್ಟ್​ ಆಗಿ ನೀಡುವುದು ಒಂದು ಸಂಪ್ರದಾಯ. ಇನ್ನು ಕೆಲವರು ನದೀಮ್​​ಗೆ ಹಣ ಸಹಾಯ ಮಾಡಿದ್ದಾರೆ.

ಇದೀಗ ಪಾಕಿಸ್ತಾನ ಮೂಲದ ಅಮೆರಿಕ ಉದ್ಯಮಿ ಅಲಿ ಶೇಖಾನಿ ಅವರು ನದೀಮ್​ಗೆ ಸುಜುಕಿ ಆಲ್ಟೋ ಕಾರನ್ನು ಗಿಫ್ಟ್​ ಆಗಿ ನೀಡಲಿದ್ದಾರೆ. ಸೈಯದ್​ ಜಫರ್​ ಜಫ್ರಿ ಎಂಬ ಪಾಕಿಸ್ತಾನದ ಕಾರ್ಯಕರ್ತ ಈ ವಿಚಾರವನ್ನು ತಿಳಿಸುತ್ತಿದ್ದಂತೆ ಉದ್ಯಮಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಕಾರು ಪಾಕಿಸ್ತಾನದ ರೂಪಾಯಿಯಲ್ಲಿ 23.31 ಲಕ್ಷ ಬೆಲೆ ಬಾಳಿದರೆ, ಭಾರತೀಯ ಕರೆನ್ಸಿಯಲ್ಲಿ ಕೇವಲ 7 ಲಕ್ಷ ರೂ. ಬೆಲೆ ಬಾಳುತ್ತದೆ.

ಆತ್ಮೀಯ ಅಲಿ ಶೇಖಾನಿ ಅವರೇ ಸವಕಳಿ ಆಸ್ತಿಗಳಿಗೆ ಈ ರೀತಿ ಹಣವನ್ನು ಖರ್ಚು ಮಾಡುವ ಬದಲು ಅರ್ಷದ್ ನದೀಮ್ ಅವರ ಪೌಷ್ಟಿಕತಜ್ಞರು, ತರಬೇತುದಾರರು ಅಥವಾ ಜಾವೆಲಿನ್‌ನಲ್ಲಿ ವಿಶ್ವ ದಾಖಲೆಯನ್ನು ಮುರಿಯಲು ಸಹಾಯ ಮಾಡುವ ಇತರ ತಾಂತ್ರಿಕ ಸಿಬ್ಬಂದಿಗೆ ನೀವು ಏಕೆ ಪ್ರಾಯೋಜಕತ್ವ ನೀಡಬಾರದು ಎಂದು ನೆಟ್ಟಿಗನೊಬ್ಬ ಉದ್ಯಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರು ಗಿಫ್ಟ್​ ನೀಡಿದ್ದು ಒಳ್ಳೆಯದು ಅಲಿ ಶೇಖಾನಿ ಅವರೇ ದಯವಿಟ್ಟು ಆಲ್ಟೊ ಕಾರನ್ನು ಕನ್ವರ್ಟಿಬಲ್ ಮಾಡಿ, ನಾನು 6.1 ಅಡಿ ಇದ್ದೇನೆ ಮತ್ತು ನನ್ನ ತಲೆಯು ಆಲ್ಟೊದ ಛಾವಣಿಗೆ ಬಡಿಯುತ್ತದೆ. ನೀವು ನೀಡಿರುವ ಆಲ್ಟೊ ಕಾರನ್ನು ನದೀಮ್ ಭಾಯ್ ಅವರು ಟಾಪ್ ಲೆಸ್ ಆಗಿ ಓಡಿಸಲು ಸಾಧ್ಯವಾಗುತ್ತದೆ ಎಂದು ಇನ್ನೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ.

ನಿಜಕ್ಕೂ ಇದು ನದೀಮ್​ಗೆ ಮಾಡಿದ ಅವಮಾನವಾಗಿದೆ. ನದೀಮ್​ ಅವರು ಬಿಎಂಡಬ್ಲ್ಯೂ ಅಥವಾ ಆಡಿ ಕಾರಿಗೆ ಅರ್ಹರಾಗಿದ್ದಾರೆ ಎಂದು ಮತ್ತೊಬ್ಬ ನೆಟ್ಟಿಗ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಅನೇಕ ನೆಟ್ಟಿಗರು ಉದ್ಯಮಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂದಹಾಗೆ ಅರ್ಷದ್ ನದೀಮ್ ಅವರು 1997, ಜನವರಿ 2ರಂದು ಪಾಕಿಸ್ತಾನದ ಪಂಜಾಬ್ ಪ್ರದೇಶದ ಖಾನೇವಾಲ್ ಎಂಬ ಹಳ್ಳಿಯಲ್ಲಿ ಜನಿಸಿದರು. ನದೀಮ್ ತನ್ನ ಹೆತ್ತವರ ಏಳು ಮಕ್ಕಳಲ್ಲಿ ಮೂರನೆಯವನು. ತಂದೆ ಮೊಹಮ್ಮದ್ ಅಶ್ರಫ್ ಕೂಲಿ ಕಾರ್ಮಿಕ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಅಶ್ರಫ್ ತನ್ನ ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಹೀಗಿದ್ದರೂ ದೊಡ್ಡ ಸಂಸಾರ ನಡೆಸುವುದು ಕಷ್ಟವಾಗಿತ್ತು. ಕೆಲವೊಮ್ಮೆ ತಿನ್ನುವುದಕ್ಕೂ ತೊಂದರೆಯಾಗುತ್ತಿತ್ತು. ಅವರು ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತಿದ್ದರು.

ಕಡು ಬಡತನದಲ್ಲೂ ಅರ್ಷದ್ ನದೀಮ್​ಗೆ ಜಾವೆಲಿನ್ ಎಸೆತದ ಮೇಲೆ ಆಸಕ್ತಿ ಹುಟ್ಟಿಕೊಂಡಿತು. ನಿಧಾನವಾಗಿ ಅದರಲ್ಲಿ ತರಬೇತಿಯನ್ನೂ ಪಡೆದರು. ಆದರೆ, ಬಡತನದ ಕಾರಣ ಅರ್ಷದ್ ನದೀಮ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಣ ಹೊಂದಿರಲಿಲ್ಲ. ಈತನ ಪ್ರತಿಭೆಯನ್ನು ಗುರುತಿಸಿದ ಗ್ರಾಮಸ್ಥರೇ ನದೀಮನನ್ನು ಬೇರೆಡೆ ಸ್ಪರ್ಧೆಗಳಿಗೆ ಕಳುಹಿಸಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಂಡು, ಅರ್ಷದ್ ನದೀಮ್ ಹಂತ ಹಂತವಾಗಿ ಬೆಳೆದರು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಪಾಕಿಸ್ತಾನದಿಂದ ಏಳು ಕ್ರೀಡಾಪಟುಗಳು ಮಾತ್ರ ಬಂದಿದ್ದರು. ಅವರಲ್ಲಿ ಅರ್ಷದ್ ನದೀಮ್ ಕೂಡ ಒಬ್ಬರು. ಆದಾಗ್ಯೂ, ಸುಮಾರು 32 ವರ್ಷಗಳ ನಂತರ ಅವರು ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದು ವೈಯಕ್ತಿಕ ವಿಭಾಗದಲ್ಲಿ ಪಾಕಿಸ್ತಾನದ ಮೊದಲ ಚಿನ್ನದ ಪದಕವಾಗಿದೆ. ಅದಕ್ಕೂ ಮುನ್ನ 2023ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಸದಾ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದಕರ ದಾಳಿ ಹಾಗೂ ಬಡತನದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಇಂದು ಚಿನ್ನದ ಪದಕ ನೀಡುವ ಮೂಲಕ ಅರ್ಷದ್ ನದೀಮ್ ಹೀರೋ ಆಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net