ನವದೆಹಲಿ: ಮುಂಬರುವ ಐಪಿಎಲ್ ಟೂರ್ನಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಈ ಬಾರಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಅನುಸರಿಸಬೇಕಾದ ನಿಯಮಗಳೇನು? ಅವುಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕೇ? ಎಂಬಿತ್ಯಾದಿ ಅಂಶಗಳನ್ನು ಫ್ರಾಂಚೈಸಿಗಳ ಜತೆಗೆ ಇತ್ತೀಚೆಗೆ ಮುಂಬೈನ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿರುವುದು ಗೊತ್ತಾಗಿದೆ. ಫ್ರಾಂಚೈಸಿಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಬಿಸಿಸಿಐ ಮುಂದೆ ಇಟ್ಟಿದ್ದಾರೆ.
ತಾಜಾ ಸಂಗತಿ ಏನೆಂದರೆ, ಐಪಿಎಲ್ 2025ರ ಹರಾಜುದಾರ ಹಗ್ ಎಡ್ಮೀಡ್ಸ್ ಮಾಡಿರುವ ಕಾಮೆಂಟ್ಸ್ ಇದೀಗ ಕ್ರೀಡಾ ಜಗತ್ತಿನಲ್ಲಿ ಬಹಳ ಚರ್ಚೆಯ ವಿಷಯವಾಗಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ವಿರಾಟ್ ಕೊಹ್ಲಿ ಬಂದರೆ ಖಂಡಿತವಾಗಿಯೂ 30 ಕೋಟಿ ರೂ. ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾದ ರನ್ ಮೆಶಿನ್ ವಿರಾಟ್ ಕೊಹ್ಲಿ, ಯಾವುದೇ ಫಾರ್ಮೆಟ್ನಲ್ಲಿ ತನ್ನ ಬ್ಯಾಟ್ ಮೂಲಕ ಅಬ್ಬರಿಸುತ್ತಾರೆ. ಕಳೆದ ಐಪಿಎಲ್ ಸೀಸನ್ನಲ್ಲಿ ರನ್ ಮಳೆಯನ್ನೇ ಹರಿಸಿ, ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡರು. ಆದರೆ, ತಮ್ಮ ತಂಡಕ್ಕೆ ಐಪಿಎಲ್ ಪ್ರಶಸ್ತಿ ನೀಡುವಲ್ಲಿ ಯಶಸ್ವಿಯಾಗುತ್ತಿಲ್ಲ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಬೇರೊಂದು ತಂಡಕ್ಕೆ ಹೋಗಲು ಕೆಲ ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್-2025 ಹರಾಜುದಾರ ಹಗ್ ಎಡ್ಮೀಡ್ಸ್ ಮಾಡಿರುವ ಕಾಮೆಂಟ್ ಇದೀಗ ಕುತೂಹಲ ಮೂಡಿಸಿದೆ. ಒಂದು ವೇಳೆ ಕೊಹ್ಲಿ ಮೆಗಾ ಹರಾಜಿಗೆ ಬಂದರೆ, ನಿಸ್ಸಂದೇಹವಾಗಿ 30 ಕೋಟಿ ರೂಪಾಯಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ. ಎಡ್ಮೀಡ್ಸ್ ಅವರ ಮಾತು ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಲ್ ಆರಂಭದಿಂದಲೂ ವಿರಾಟ್ ಕೊಹ್ಲಿ ಆರ್ಸಿಬಿಯನ್ನೇ ಪ್ರತಿನಿಧಿಸುತ್ತಿದ್ದಾರೆ. ಪ್ರತಿಯೊಬ್ಬ ಆಟಗಾರನು ಬೇರೆ ಬೇರೆ ತಂಡಗಳಲ್ಲಿ ಆಡಿರಬಹುದು ಆದರೆ, ಕೊಹ್ಲಿ ಮಾತ್ರ ಒಮ್ಮೆಯೂ ತಮ್ಮ ತಂಡವನ್ನು ಬದಲಾಯಿಸಿಲ್ಲ. ತಂಡದ ಪರವಾಗಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಆದರೆ, ಒಮ್ಮೆಯೂ ಪ್ರಶಸ್ತಿ ನೀಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಕೊಹ್ಲಿಗೆ ಇತರ ಆಟಗಾರರಿಂದ ಸರಿಯಾಗ ಬೆಂಬಲ ಸಿಗುತ್ತಿಲ್ಲ. ಇಡೀ ಆರ್ಸಿಬಿ ತಂಡ ಕೊಹ್ಲಿ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಕಳೆದ ಐಪಿಎಲ್‌ನಲ್ಲೂ ಇದೇ ಪರಿಸ್ಥಿತಿ ಪುನರಾವರ್ತನೆಯಾಯಿತು. ಹಲವು ಪಂದ್ಯಗಳನ್ನು ಕೊಹ್ಲಿ ಏಕಾಂಗಿಯಾಗಿ ನಿಂತು ಗೆಲ್ಲಿಸಿದ್ದಾರೆ. ಕೊಹ್ಲಿಗೆ ಇತರೆ ಆಟಗಾರರು ಉತ್ತಮ ಸಾಥ್ ನೀಡಿದರೆ, ಆರ್ಸಿಬಿ ಕಪ್ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ.
ಇನ್ನು ಕೊಹ್ಲಿ ಆರ್ಸಿಬಿ ಬಿಟ್ಟು ಹೋಗುವ ಸಾಧ್ಯತೆಯೂ ಇಲ್ಲ. ಏಕೆಂದರೆ, ಸ್ವತಃ ಇದನ್ನು ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಬೆಂಗಳೂರು ನನ್ನ ಎರಡನೇ ಮನೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕೊಹ್ಲಿಗೆ ಹಣಕ್ಕಿಂತ ಇಲ್ಲಿನ ಅಭಿಮಾನಿಗಳ ಬಳಗ ತುಂಬಾ ಇಷ್ಟ. ಇಂತಹ ಅಭಿಮಾನಿಗಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಹೀಗಾಗಿ ಕೊಹ್ಲಿ ಮತ್ತೆ ಹರಾಜಿಗೆ ಎಂಟ್ರಿಯಾಗುವುದು ದೂರದ ಮಾತು ಎನ್ನಬಹುದು. (ಏಜೆನ್ಸೀಸ್)
IPL auctioneer Hugh Edmeades said, “Virat Kohli could get 30cr if he enters the IPL auction”. (Arvind Krishnan). pic.twitter.com/Mkxo2w7CQC
— Mufaddal Vohra (@mufaddal_vohra) August 12, 2024
ಆಲ್ಟೊ ಕಾರು ಗಿಫ್ಟ್ ನೀಡಿ ಚಿನ್ನದ ಹುಡುಗ ನದೀಮ್ಗೆ ಅವಮಾನ! ಪಾಕಿಸ್ತಾನದಲ್ಲಿ ವ್ಯಕ್ತವಾಯ್ತು ಭಾರಿ ಆಕ್ರೋಶ
ಮನು ಭಾಕರ್-ನೀರಜ್ ಮದ್ವೆ ಫಿಕ್ಸ್ ಆಯ್ತಾ? ತಲೆ ಮೇಲೆ ಕೈಯಿಟ್ಟು ಆಣೆ ಮಾಡಿಸಿದ ತಾಯಿ, ನಾಚಿದ ಮನು!