

ನವದೆಹಲಿ: ನೀರಜ್ ಚೋಪ್ರಾ ಮತ್ತು ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ನ ಪದಕ ವಿಜೇತರು. ಜಾವಲಿನ್ ಎಸೆತದಲ್ಲಿ ನೀರಜ್ ಬೆಳ್ಳಿ ಗೆದ್ದರೆ, ಶೂಟಿಂಗ್ನಲ್ಲಿ ಮನು ಭಾಕರ್ ಒಂದಲ್ಲ, ಎರಡು ಕಂಚಿನ ಪದಕ ಗೆದ್ದರು. ಭಾರತದ ಈ ಇಬ್ಬರು ಕ್ರೀಡಾ ತಾರೆಯರು ಇದೀಗ ಬೇರೊಂದು ವಿಚಾರಕ್ಕೆ ಭಾರಿ ಸುದ್ದಿಯಲ್ಲಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೀರಜ್ ಮತ್ತು ಮನು ಭಾಕರ್ ಅವರಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ. ವಿಡಿಯೋದಲ್ಲಿ ಮನು ಮತ್ತು ನೀರಜ್ ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದಾರೆ. ಅಲ್ಲದೆ, ಮತ್ತೊಂದು ವಿಡಿಯೋದಲ್ಲಿ ಮನು ಭಾಕರ್ ತಾಯಿ ಸುಮೇಧಾ ಅವರು ನೀರಜ್ ಜತೆ ಬಹಳ ಆಪ್ತತೆಯಿಂದ ಮಾತನಾಡಿದ್ದಾರೆ. ಈ ಎರಡು ವಿಡಿಯೋ ವೈರಲ್ ಆಗಿದ್ದೇ ತಡ ನಾನಾ ಊಹಾಪೋಹಗಳು ಹರಿದಾಡಲು ಆರಂಭಿಸಿವೆ.
ವೈರಲ್ ವಿಡಿಯೋಗಳನ್ನು ನೋಡಿದ ನೆಟ್ಟಿಗರು ನೀರಜ್ ಮತ್ತು ಮನು ಭಾಕರ್ ಒಳ್ಳೆಯ ಸ್ನೇಹಿತರೇ? ಅಥವಾ ಇಬ್ಬರ ನಡುವೆ ಏನಾದರೂ ಪ್ರೀತಿ ಚಿಗುರಿದೆಯೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಸುಮೇಧಾ ಅವರು ನೀರಜ್ ಜತೆ ತಮ್ಮ ಮಗಳ ಮದುವೆ ಫಿಕ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಸುಮೇಧಾ ಅವರು ನೀರಜ್ ಕೈಹಿಡಿದು ತಮ್ಮ ತಲೆಯ ಮೇಲಿಟ್ಟು ಪ್ರಮಾಣ ಮಾಡಿಸಿರುವುದು ನೆಟ್ಟಿಗರನ್ನು ವಿಶೇಷವಾಗಿ ಗಮನ ಸೆಳೆದಿದೆ. ಖಂಡಿತ ಇಲ್ಲಿ ಮದುವೆ ಮಾತುಕತೆ ನಡೆದಿದೆ. ತಮ್ಮ ಮಗಳನ್ನು ಮದುವೆ ಆಗುವಂತೆ ಸುಮೇಧಾ ಅವರು ಕೇಳಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಒಂದು ವೇಳೆ ಇದು ನಿಜವಾದರೆ, ಭಾರತಕ್ಕೆ ಮತ್ತೊಂದು ಕ್ರೀಡಾ ದಂಪತಿ ಸಿಗಲಿದೆ. ಇಬ್ಬರ ಜೋಡಿ ಚೆನ್ನಾಗಿದೆ. ಇಬ್ಬರು ಮದುವೆಯಾದರೆ ನಿಜಕ್ಕೂ ಖುಷಿಯಾಗುತ್ತದೆ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಮನುವಿನ ತಾಯಿ ಸುಮೇಧಾ ಅವರು ನೀರಜ್ ಜೊತೆ ಏನು ಮಾತಾಡಿದರು? ಈ ಪ್ರಶ್ನೆಗೆ ಸದ್ಯಕ್ಕೆ ಸುಮೇಧಾ ಮತ್ತು ನೀರಜ್ ಮಾತ್ರ ಉತ್ತರಿಸಬೇಕಿದೆ. ಆದರೆ, ನೀರಜ್ ಮತ್ತು ಮನು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿವೆ.
ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ದಾಖಲೆ ಸೃಷ್ಟಿಸಿರುವುದು ಗೊತ್ತೇ ಇದೆ. ಪ್ಯಾರಿಸ್ ಒಲಿಂಪಿಕ್ಸ್-2024 ಮಹಿಳೆಯರ 10 ಮೀಟರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಮತ್ತು ಮಿಶ್ರ 10 ಮೀಟರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ದಾಖಲೆಯನ್ನು ನಿರ್ಮಿಸಿದರು. 25 ಮೀಟರ್ಸ್ ವಿಭಾಗದಲ್ಲಿ ಮೂರನೇ ಪದಕ ಸ್ವಲ್ಪದರಲ್ಲೇ ಕೈ ತಪ್ಪಿತು. ಇನ್ನೂ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್ನಲ್ಲಿ 89.45 ಮೀಟರ್ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದರು. (ಏಜೆನ್ಸೀಸ್)