ಎರಡನೇ ಮದುವೆ ವದಂತಿಯ ನಡುವೆಯೇ ಮಹತ್ವದ ಘೋಷಣೆ ಮಾಡಿದ ಸಾನಿಯಾ ಮಿರ್ಜಾ!

Sania Mirza
Published on: 

ನವದೆಹಲಿ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತನ್ನ ಆಟದಿಂದ ಮಾತ್ರವಲ್ಲ ಸೌಂದರ್ಯದಿಂದಲೂ ಪ್ರೇಕ್ಷಕರ ಮನ ಸೆಳೆದಿರುವ ಸಾನಿಯಾ, ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್‌ನಿಂದ ವಿಚ್ಛೇದನ ಪಡೆದಿದ್ದು, ದುಬೈನಲ್ಲಿ ತಮ್ಮ ಮಗನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

ತಮ್ಮ ಮಾಜಿ ಪತಿ ಮಲಿಕ್​ ಪಾಕ್​ ನಟಿ ಸನಾ ಜಾವೇದ್​ರನ್ನು ಮದುವೆ ಆಗಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಸಾನಿಯಾ ಮಿರ್ಜಾ ಯಾವಾಗ ಎರಡನೇ ಮದುವೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಸಾನಿಯಾ ಅವರು ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಅವರನ್ನು ವರಿಸುತ್ತಾರೆ ಎಂದು ಸುದ್ದಿಯಾಗಿತ್ತು. ಶಮಿ ಕೂಡ ತಮ್ಮ ಪತ್ನಿಗೆ ವಿಚ್ಛೇದನಾ ನೀಡಿದ್ದಾರೆ. ಇಬ್ಬರು ಒಂದೇ ಧರ್ಮದವರಾಗಿರುವುದರಿಂದ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದು ಕೇವಲ ವದಂತಿಯಷ್ಟೇ ಎಂದು ಇಬ್ಬರು ತಾರೆಯರು ಸ್ಪಷ್ಟನೆ ನೀಡಿದ್ದಾರೆ.

ಮದುವೆಯ ವದಂತಿ ನಡುವೆಯೇ ಸಾನಿಯಾ ಮಿರ್ಜಾ ಅವರ ಮಹತ್ವದ ಘೋಷಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಾನಿಯಾ ಅವರು ಟೆನ್ನಿಸ್ ತರಬೇತಿಯ ಬಗ್ಗೆ ಚರ್ಚಿಸಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿಯನ್ನು 2013ರ ಮಾರ್ಚ್ ತಿಂಗಳಲ್ಲಿ ಭಾರತೀಯ ಟೆನ್ನಿಸ್ ಆಟಗಾರರಿಗೆ ಉನ್ನತ ದರ್ಜೆಯ ಟೆನ್ನಿಸ್​ ತರಬೇತಿ ನೀಡುವ ಗುರಿಯೊಂದಿಗೆ ಸ್ಥಾಪಿಸಲಾಯಿತು. ಸೆಪ್ಟೆಂಬರ್ 9 ರಿಂದ 13ರವರೆಗೆ ತನ್ನ ಅಕಾಡೆಮಿಯಲ್ಲಿ ಐದು ದಿನಗಳ ತರಬೇತಿ ನಡೆಯಲಿದೆ ಎಂದು ಸಾನಿಯಾ ಮಿರ್ಜಾ ಘೋಷಿಸಿದ್ದಾರೆ. 12 ರಿಂದ 18 ವರ್ಷದೊಳಗಿನ ಮಕ್ಕಳು ಭಾಗವಹಿಸಲು ಸ್ವಾಗತ ಕೋರಿದ್ದಾರೆ.

ನೀವು ನಿರ್ಣಯವನ್ನು ತೆಗೆದುಕೊಂಡಿದ್ದೀರಿ ಮತ್ತು ನಿಮಗೆ ಅಗತ್ಯವಿರುವ ಟೆನ್ನಿಸ್ ತರಬೇತಿಯನ್ನು ನೀಡುವ ನಿರ್ಣಯವನ್ನು ನಾವು ಹೊಂದಿದ್ದೇವೆ. ಚಾಂಪಿಯನ್ ಆಗುವ ಮೊದಲ ಹಂತವು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್ ಮಾಡುವುದಾಗಿದೆ. ಆ ಅವಕಾಶವನ್ನು ನಾವು ನೀಡುತ್ತೇವೆ. ನಿಮ್ಮ ಆಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು 5 ದಿನಗಳ ತೀವ್ರವಾದ ತರಬೇತಿಗಾಗಿ ಸೆಪ್ಟೆಂಬರ್ 9 ರಿಂದ 13 ರವರೆಗೆ ನಮ್ಮೊಂದಿಗೆ ಸೇರಿಕೊಳ್ಳಿ. ಚಾಂಪಿಯನ್ ಆಗಲು ಸಿದ್ಧರಿದ್ದೀರಾ? ಅದು ನೆರವೇರುವಂತೆ ಮಾಡೋಣ. ಸದ್ಯ ಬುಕ್ಕಿಂಗ್​ ವೇಗವಾಗಿ ಭರ್ತಿಯಾಗುತ್ತಿರುವುದರಿಂದ. ನಿಮ್ಮ ಬುಕ್ಕಿಂಗ್​ ಅನ್ನು ಖಚಿತಪಡಿಸಿಕೊಳ್ಳಲು ಕರೆ ಅಥವಾ ವಾಟ್ಸ್​ಆ್ಯಪ್​ ಮೂಲಕ +91 8121594618 ನಂಬರ್​ಗೆ ನಮ್ಮನ್ನು ಸಂಪರ್ಕಿಸಿ ಎಂದು ಸಾನಿಯಾ ಹೇಳಿದ್ದಾರೆ.

ಅಂದಹಾಗೆ ಸಾನಿಯಾ ಮಿರ್ಜಾ ಜತೆಗಿನ ವಿವಾಹ ವಿಚ್ಛೇದನದ ವಂದತಿಗಳಿಗೆ ತೆರೆ ಎಳೆದಿದ್ದೇ ಕ್ರಿಕೆಟಿಗ ಶೋಯಿಬ್​ ಮಲಿಕ್. ಪಾಕ್​ನ ಕಿರುತೆರೆ ನಟಿ ಸನಾ ಜಾವೇದ್​ ಅವರೊಂದಿಗೆ ಎರಡನೇ ವಿವಾಹವಾಗಿರುವ ಕ್ಷಣಗಳನ್ನು ಶೋಯಿಬ್​ ಮಲಿಕ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಾನಿಯಾ ಮಿರ್ಜಾ ಜತೆಗಿನ 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದರು.

2010ರಲ್ಲಿ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದ ಶೋಯಿಬ್​ ಮಲಿಕ್​ ದಂಪತಿಗೆ 2018ರಲ್ಲಿ ಗಂಡು ಜನಿಸಿತ್ತು. 2022ರಿಂದಲೂ ಇವರಿಬ್ಬರೂ ಪ್ರತ್ಯೇಕವಾಗಿ ದುಬೈನಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇವರಿಬ್ಬರ ನಡುವೆ ವಿಚ್ಛೇದನ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಜತೆಗೆ ಇವರಿಬ್ಬರೂ ಕಳೆದ ಎರಡು ವರ್ಷಗಳಲ್ಲಿ ವಿರಳವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಯಾವಾಗ ಮಲಿಕ್​, ಸನಾ ಜತೆಗಿನ ಫೋಟೋಗಳನ್ನು ಹಂಚಿಕೊಂಡರೋ ಆಗ ಡಿವೋರ್ಸ್​ ಖಚಿತವಾಯಿತು. (ಏಜೆನ್ಸೀಸ್​)