

ಹೈದರಾಬಾದ್: ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಇತ್ತೀಚೆಗಷ್ಟೇ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಶ್ರೀಲಂಕಾ ಪ್ರವಾಸ ಮುಗಿಸಿ, ಹೈದರಾಬಾದ್ಗೆ ಬಂದಿಳಿದಿರುವ ಸಿರಾಜ್, ತಮ್ಮ ಕುಟುಂಬಕ್ಕಾಗಿ ದುಬಾರಿ ಕಾರು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಆ ಫೋಟೋಗಳು ವೈರಲ್ ಆಗಿವೆ.
ಸಿರಾಜ್ ಅವರು 3 ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್ ರೋವರ್ ಖರೀದಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಸಿರಾಜ್, ನಿಮ್ಮ ಕನಸುಗಳ ಮೇಲೆ ಯಾವುದೇ ಮಿತಿಗಳನ್ನು ಹೊಂದಬೇಡಿ, ಏಕೆಂದರೆ ಅವುಗಳು ನಿಮ್ಮನ್ನು ಹೆಚ್ಚು ಶ್ರಮವಹಿಸಲು ಮತ್ತು ಹೆಚ್ಚಿನದಕ್ಕಾಗಿ ಶ್ರಮಿಸುವಂತೆ ಮಾಡುತ್ತದೆ. ನೀವು ಸ್ಥಿರತೆಯೊಂದಿಗೆ ಮಾಡುವ ಪ್ರಯತ್ನವೇ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ನನ್ನ ಕುಟುಂಬಕ್ಕಾಗಿ ಈ ಕನಸಿನ ಕಾರನ್ನು ಖರೀದಿಸಲು ನನ್ನಿಂದ ಸಾಧ್ಯವಾಗುವಂತೆ ಮಾಡಿದ್ದಕ್ಕಾಗಿ ಆ ದೇವರಿಗೆ ಕೃತಜ್ಞರಾಗಿರುತ್ತೇನೆಂದು ಸಿರಾಜ್ ಬರೆದುಕೊಂಡಿದ್ದಾರೆ.
ಅಂದಹಾಗೆ ಸಿರಾಜ್ ಟಿ20 ವಿಶ್ವಕಪ್ 2024 ವಿಜೇತ ತಂಡದ ಸದಸ್ಯರಾಗಿದ್ದರು. ಟೀಮ್ ಇಂಡಿಯಾಗೆ ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನದಲ್ಲಿ ಸಿರಾಜ್ಗೆ 5 ಕೋಟಿ ರೂ. ಸಿಕ್ಕಿದೆ. ಆ ಹಣದಲ್ಲಿ ಈ ಲ್ಯಾಂಡ್ ರೋವರ್ ಖರೀದಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಈಗಾಗಲೇ ಸಿರಾಜ್ ಬಳಿ ಟೊಯೊಟಾ ಕೊರೊಲಾ (22 ಲಕ್ಷ ರೂ.), ಟೊಯೊಟಾ ಫಾರ್ಚುನರ್ (ರೂ. 40 ಲಕ್ಷ), ಬಿಎಂಡಬ್ಲ್ಯು 5 ಸಿರೀಸ್ (75 ಲಕ್ಷ ರೂ.), ಮರ್ಸಿಡಿಸ್ ಬೆಂಜ್ ಕ್ಲಾಸ್ (1.86 ಕೋಟಿ ರೂ.), ರೇಂಜ್ ರೋವರ್ ವಾಗ್ಯು (2.8 ಕೋಟಿ ರೂ.) ಹಾಗೂ ಮಹೀಂದ್ರ ಥಾರ್ ಕಾರುಗಳಿವೆ. ಇದೀಗ ಅವರ ಗ್ಯಾರೇಜ್‌ಗೆ ಮತ್ತೊಂದು ಐಷಾರಾಮಿ ಕಾರು ಸೇರಿಕೊಂಡಿದೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಿರಾಜ್ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಕೊನೆಯ ಏಕದಿನ ಪಂದ್ಯದಲ್ಲಿ ಅವರು ಕಳಪೆ ಬೌಲಿಂಗ್ ಮಾಡುವ ಮೂಲಕ ಸುಲಭವಾಗಿ ರನ್ ನೀಡಿದರು. (ಏಜೆನ್ಸೀಸ್)