

ಬೆಂಗಳೂರು : ಬಳಸಲು ಅವಧಿ ಮೀರಿದ ಮಕ್ಕಳು ತಿನಿಸು, ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ವ್ಯಾಪಾರಿಯನ್ನು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿಯ ಸಿದ್ದಿಕ್ ಪಾಷ ಬಂಧಿತ. 50 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಕೆ.ಜಿ. ಹಳ್ಳಿಯ ಶ್ಯಾಂಪುರ ಮುಖ್ಯರಸ್ತೆಯ ಅಂಗಡಿ ಮಾಲೀಕ ಪಾಷ, ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪ ವೆರ್‌ಹೌಸ್‌ನಲ್ಲಿ ಅವಧಿ ಮೀರಿ ದಿನ ಬಳಕೆಯ ದಿನಸಿ ಪದಾರ್ಥ, ಆಹಾರ ಉತ್ಪನ್ನ, ತಂಪು ಪಾನೀಯ, ಶಿಶು ಆಹಾರ, ನ್ಯಾಪ್ ಕಿನ್, ಅಡಿಗೆ ಎಣ್ಣೆ, ಸೌಂದರ್ಯ ವರ್ಧಕ, ಬಿಸ್ಕೇಟ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ನಿಗದಿತ ಬೆಲೆಗಿಂತ ಶೇ.10 ಕಡಿಮೆ ದರದಲ್ಲಿ ಖರೀದಿಸುತ್ತಿದ್ದ.
ಉಗ್ರಾಣದಿಂದ ಸಾಮಗ್ರಿಗಳನ್ನು ತರುವುದರಿಂದ ಕಡಿಮೆ ಬೆಲೆ ದೊರೆಯುವುದಾಗಿ ನೆಪ ಹೇಳಿ ಗ್ರಾಹಕರು ಕೇಳಿ ಮಾರಾಟ ಮಾಡುತ್ತಿದ್ದ. ಜನರ ಆರೋಗ್ಯದ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದರೂ ಅರ್ಧ ಬೆಲೆಗೆ ಮಾರುತ್ತಿದ್ದ. ಅಂಗಡಿಯಲ್ಲಿ ಮಾರಾಟಕ್ಕೆ ಕಾನೂನು ಬಾಹಿರವಾಗಿ ಬಾಲ ಕಾರ್ಮಿಕರನ್ನು ಪಾಷ ಬಳಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹೋಟೆಲ್‌ನಲ್ಲಿ ಸಿಹಿ ತಿನಿಸಿಗೆ ಬಳಕೆ
ಪಾಷ ಅಂಗಡಿಯಲ್ಲಿದ್ದ ಮಕ್ಕಳ ಮತ್ತು ಶಿಶು ಆಹಾರ ಪದಾರ್ಥಗಳು ಕೂಡ ಅವಧಿ ಮೀರಿದ್ದು ಪತ್ತೆಯಾಗಿವೆ. ಕೆಲ ಹೋಟೆಲ್ ಮಾಲೀಕರು ಮಕ್ಕಳ ಬೂಸ್ಟ್ ಖರೀದಿಸಿ ಸಿಹಿ ತಿನಿಸಿಗೆ ಬಳಕೆ ಮಾಡುತ್ತಿದ್ದಾರೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.
ಅಂಗಡಿಗಳಲ್ಲಿ ವಸ್ತುಗಳ ಖರೀದಿಸುವ ಮೊದಲು ಬಳಸಲು ನಿಗದಿತ ಮಾಡಿರುವ ಅವಧಿ (ಎಕ್ಸ್‌ಪೈರಿ ಡೇಟ್)ಗ್ರಾಹಕರು ಗಮನಿಸಿ. ಅವಧಿ ಮೀರಿದ್ದರೇ ಸಿಸಿಬಿ ಪೊಲೀಸ್ ಪೊಲೀಸರಿಗೆ ಮಾಹಿತಿ ನೀಡಿ.