ಬೊಕ್ಕಸಕ್ಕೆ ಬರ, ವೇತನ ವರ: ಮುಖ್ಯಮಂತ್ರಿ, ಸಚಿವರು, ಶಾಸಕರ ಪಗಾರ, ಭತ್ಯೆ ಶೇ.50 ಹೆಚ್ಚಳ

Front
Published on

ಬೆಂಗಳೂರು: ಕೋವಿಡ್​ನಿಂದಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸರ್ಕಾರ ತಿಣುಕಾಡುತ್ತಿರುವ ಸಂದರ್ಭದಲ್ಲೇ ಜೀವನ ನಿರ್ವಹಣಾ ವೆಚ್ಚ ಹೆಚ್ಚಳವಾಗಿರುವ ನೆಪದಲ್ಲಿ ಮುಖ್ಯಮಂತ್ರಿ, ಮಂತ್ರಿಗಳು, ರಾಜ್ಯ ಮಂತ್ರಿಗಳು, ಉಪ ಮಂತ್ರಿಗಳು ಮತ್ತು ಶಾಸಕರ ಸಂಬಳ, ಭತ್ಯೆಗಳನ್ನು ಹೆಚ್ಚಳ ಮಾಡುವ ಪ್ರಮುಖ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿದೆ. ಸಿಎಂ ಮತ್ತು ಸಚಿವರ ವೇತನ ಸರಾಸರಿ ಶೇ.50 ಹೆಚ್ಚಳವಾದರೆ, ಶಾಸಕರು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಹಾಗೂ ಸಚೇತಕರ ಭತ್ಯೆಯನ್ನೂ ಹೆಚ್ಚಿಸಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಯಾವುದೇ ಚರ್ಚೆ, ವಿರೋಧವಿಲ್ಲದೆ ವಿಧೇಯಕಗಳು ಅಂಗೀಕಾರಗೊಂಡವು.

2015ರಿಂದೀಚೆಗೆ ಸಂಬಳ, ಭತ್ಯೆ ಪರಿಷ್ಕರಿಸಿಲ್ಲ. ಆದ್ದರಿಂದ ಸಂಬಳ, ಮನೆಬಾಡಿಗೆ ಭತ್ಯೆ, ಆತಿಥ್ಯ ಭತ್ಯೆ, ವಾಹನ ಭತ್ಯೆ ಇತ್ಯಾದಿಗಳ ಪರಿಷ್ಕರಣೆಗಾಗಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ 2022 ಮತ್ತು ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ)ವಿಧೇಯಕಗಳನ್ನು ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಎರಡೂ ಸದನಗಳಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕಗಳನ್ನು ಮಂಡಿಸಿದರು. ಕಾಂಗ್ರೆಸ್ ಸದಸ್ಯರ ಗದ್ದಲ, ಗಲಾಟೆ ನಡುವೆಯೇ ಯಾವುದೇ ಚರ್ಚೆ, ವಿರೋಧ ವ್ಯಕ್ತವಾಗದೆ ವಿಧೇಯಕಗಳು ಅಂಗೀಕಾರಗೊಂಡವು.

ಇನ್ಮುಂದೆ ಸ್ವಯಂಚಾಲಿತ ಏರಿಕೆ: ಕೇಂದ್ರದ ಮಾದರಿಯಲ್ಲಿ ಇನ್ಮುಂದೆ ಮಾರುಕಟ್ಟೆ ಸೂಚ್ಯಂಕ ಆಧರಿಸಿ ತನ್ನಿಂದ ತಾನೇ ಮಂತ್ರಿಗಳು, ಶಾಸಕರ ವೇತನ, ಭತ್ಯೆ ಪರಿಷ್ಕರಣೆಗೊಳ್ಳಲಿವೆ. ವೇತನ ಪರಿಷ್ಕರಣೆಗೆ ಪದೇಪದೆ ವಿಧೇಯಕ ಮಂಡಿಸುವ ಅಗತ್ಯವಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ವರ್ಷಕ್ಕೆ 92 ಕೋಟಿ ರೂ. ಅಗತ್ಯ: ವಿಧೇಯಕ ತಿದ್ದುಪಡಿಯಿಂದ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳಿಗಾಗಿ ಪ್ರತಿ ವರ್ಷಕ್ಕೆ 25.40 ಕೋಟಿ ರೂ. ಆವರ್ತಕ ವೆಚ್ಚ ಉಂಟಾಗಲಿದೆ. ಅದೇ ರೀತಿ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನ ಮತ್ತು ಭತ್ಯೆಗಳಿಗಾಗಿ 67 ಕೋಟಿ ರೂ. ಹೆಚ್ಚುವರಿ ಆವರ್ತಕ ವೆಚ್ಚ ಉಂಟಾಗಲಿದೆ ಎಂದು ವಿವರಣೆ ನೀಡಿದರು.

ಏಪ್ರಿಲ್​ನಿಂದ ಜಾರಿ: ಪರಿಷ್ಕೃತ ವೇತನ ಮತ್ತು ಭತ್ಯೆಗಳು ಏ.1, 2022 ರಿಂದ ಜಾರಿಗೆ ಬರಲಿವೆ.

ಎಷ್ಟಿತ್ತು? ಎಷ್ಟಾಯ್ತು?

ಮುಖ್ಯಮಂತ್ರಿ: ಸಂಬಳ ಮಾಹೆ: 50,000-75, 000 ರೂ. -ಠಿ;ಆತಿಥ್ಯ ಭತ್ಯೆ(ವಾರ್ಷಿಕ)- 3 ಲಕ್ಷದಿಂದ 4.50 ಲಕ್ಷ ರೂ.

ಸಂಪುಟ ದರ್ಜೆ ಮಂತ್ರಿಗಳು: ಸಂಬಳ ಮಾಹೆ-40,000-60,000 ರೂ.; ಆತಿಥ್ಯ ಭತ್ಯೆ(ವಾರ್ಷಿಕ) 3 ಲಕ್ಷ ರೂ.-4.50 ಲಕ್ಷ ರೂ.; ಮಂತ್ರಿಗಳ ಮನೆ ಬಾಡಿಗೆ-80,000-1.20 ಲಕ್ಷ ರೂ.; -ಮನೆ ನಿರ್ವಹಣಾ ವೆಚ್ಚ- 20,000-30,000 ರೂ.;ಪೆಟ್ರೋಲ್ ಮಾಹೆ- 1000-2000 ಲೀ.

ರಾಜ್ಯ ಮಂತ್ರಿಗಳು: ಸಂಬಳ(ಮಾಹೆ)- 35,000-50,000 ರೂ.;ಆತಿಥ್ಯ ಭತ್ಯೆ(ವಾರ್ಷಿಕ)-2 ಲಕ್ಷ ರೂ.-3 ಲಕ್ಷ ರೂ.;ಮನೆ ಬಾಡಿಗೆ(ಮಾಹೆ)-80,000-1.20 ಲಕ್ಷ ರೂ.;ಮನೆ ನಿರ್ವಹಣಾ ವೆಚ್ಚ-20,000-30,000 ರೂ.;ಪೆಟ್ರೋಲ್ ಮಾಹೆ-1000-1,500 ಲೀ.

ಉಪಮಂತ್ರಿಗಳು: ಸಂಬಳ ಮಾಹೆ-30,000-50,000 ರೂ.;ಆತಿಥ್ಯ ಭತ್ಯೆ ವಾರ್ಷಿಕ-1.50 ಲಕ್ಷ-2 ಲಕ್ಷ ರೂ.;ಮನೆ ಬಾಡಿಗೆ ಮಾಹೆ-80,000-1.20 ಲಕ್ಷ ರೂ.;ಮನೆ ನಿರ್ವಹಣಾ ವೆಚ್ಚ- 20,000-30,000 ರೂ.;ಪೆಟ್ರೋಲ್ ಮಾಹೆ-1000-1500 ಲೀ.;ದಿನ ಭತ್ಯೆ;ದಿನಕ್ಕೆ 2000-3000 ರೂ. ಹೊರ ರಾಜ್ಯ ಪ್ರವಾಸ: 5000- 7000 ರೂ.

ವಿಧಾನಸಭೆ/ವಿಧಾನ ಪರಿಷತ್ ಸದಸ್ಯರ ಭತ್ಯೆಗಳ ಹೆಚ್ಚಳ

  • ಕ್ಷೇತ್ರದ ಭತ್ಯೆ: 40,000-60,000 ರೂ.
  • ಆತಿಥ್ಯ ಭತ್ಯೆ (ವಾರ್ಷಿಕ): 2 ಲಕ್ಷ ರೂ. 2.50 ಲಕ್ಷ ರೂ.
  • ಪ್ರಯಾಣ ಭತ್ಯೆ-ಪ್ರತಿ ಕಿ.ಮೀ. 25 ರಿಂದ 35 ರೂ.
  • ದಿನ ಭತ್ಯೆ(ಪ್ರಯಾಣ): 2000-2500 ರೂ.
  • ಹೊರ ರಾಜ್ಯ ಪ್ರವಾಸ: 5 ಸಾವಿರದಿಂದ 7 ಸಾವಿರ ರೂ.ಗೆ ಏರಿಕೆ
  • ದೂರವಾಣಿ ವೆಚ್ಚ ಮಾಹೆ-20,000 ರೂ.
  • ಆಪ್ತ ಸಹಾಯಕನಿಗೆ ಮತ್ತು ರೂಮ್ ಬಾಯ್ ಸಂಬಳ ಮಾಹೆ:10,000-20,000 ರೂ.

ಸಭಾಪತಿ ಮತ್ತು ಸಭಾಧ್ಯಕ್ಷರು: ಸಂಬಳ ಮಾಹೆ-50,000-75,000 ರೂ., ಆತಿಥ್ಯ ಭತ್ಯೆ ವಾರ್ಷಿಕ-3 ಲಕ್ಷ ರೂ.-4 ಲಕ್ಷ ರೂ., ಮನೆ ಬಾಡಿಗೆ -80,000- 1.60 ಲಕ್ಷ ರೂ., ಪೆಟ್ರೋಲ್ ಮಾಹೆ-1000-2000 ಲೀ.

ಪ್ರಯಾಣ ಭತ್ಯೆ(ಸಭಾಪತಿ, ಉಪಸಭಾಪತಿ, ಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕರು, ಸರ್ಕಾರಿ ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರು): 30-40 ರೂ. (ಪ್ರತಿ ಕಿ.ಮೀ.). ಪ್ರಯಾಣ ದಿನಗಳಿಗಾಗಿ ಮತ್ತು ಯಾವುದೇ ಸ್ಥಳದಲ್ಲಿ ಉಳಿದುಕೊಳ್ಳಲು ಪ್ರತಿ ದಿನಕ್ಕೆ 2000-2500 ರೂ., ರಾಜ್ಯದ ಹೊರಗೆ-5000-7000 ರೂ.

ಉಪಸಭಾಪತಿ ಮತ್ತು ಉಪಸಭಾಧ್ಯಕ್ಷರು: ಸಂಬಳ ಮಾಹೆ-40,000-60,000 ರೂ.. ಪೆಟ್ರೋಲ್ ಮಾಹೆ-1000-1500 ಲೀ.

ಉಪಸಭಾಪತಿ, ಉಪಸಭಾಧ್ಯಕ್ಷ ಅಥವಾ ಸಭಾಪತಿ ಅಥವಾ ಸಭಾಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸುವ ವ್ಯಕ್ತಿಗೆ ಸಂಬಳ ಮಾಹೆ-40,000-60,000 ರೂ.

ಉಪ ಸಭಾಪತಿ/ಉಪ ಸಭಾಧ್ಯಕ್ಷರು ಪೆಟ್ರೋಲ್ ಮಾಹೆ-750-1500 ಲೀ.

ವಿರೋಧ ಪಕ್ಷದ ನಾಯಕ: ಸಂಬಳ ಮಾಹೆ: 40,000- 60,000 ರೂ.; ಆತಿಥ್ಯ ಭತ್ಯೆ ವಾರ್ಷಿಕ-2 ಲಕ್ಷ ರೂ.-2.50 ಲಕ್ಷ ರೂ.; ಪೆಟ್ರೋಲ್ ಮಾಹೆ-1000-2000 ಲೀ.

ಸರ್ಕಾರಿ ಮುಖ್ಯ ಸಚೇತಕರು: ಸಂಬಳ ಮಾಹೆ-35,000-50,000 ರೂ.; ಪೆಟ್ರೋಲ್ ಮಾಹೆ-1000-1500 ಲೀ.

ವಿರೋಧ ಪಕ್ಷದ ಸಚೇತಕರು: ಸಂಬಳ ಮಾಹೆ-35,000-50,000 ರೂ.; ಪೆಟ್ರೋಲ್ ಮಾಹೆ-1000-1,500 ಲೀ.

ವಿಧಾನಸಭೆ/ವಿಧಾನ ಪರಿಷತ್ ಸದಸ್ಯರು: ಸಂಬಳ ಮಾಹೆ-20,000-40,000 ರೂ.; ವಿಧಾನಸಭೆ/ವಿಧಾನ ಪರಿಷತ್ ಸದಸ್ಯರ ನಿವೃತ್ತಿ ವೇತನ; ಪ್ರತಿ ಮಾಹೆ-40,000-50,000 ರೂ.

ಗದ್ದಲ, ಗೋಜಲಿನಲ್ಲೇ ಅಧಿವೇಶನ ಅಂತ್ಯ: ಸಚಿವ ಈಶ್ವರಪ್ಪ ಅವರ ರಾಷ್ಟ್ರಧ್ವಜ ಹೇಳಿಕೆ ವಿಚಾರವಾಗಿ ಸರ್ಕಾರ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಿನ ಸಂಘರ್ಷದಿಂದಾಗಿ, ವರ್ಷದ ಮೊದಲ ಅಧಿವೇಶನ ರಾಜಕೀಯ ಹಗ್ಗಜಗ್ಗಾಟಕ್ಕೆ ವೇದಿಕೆಯಾಯಿತು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡುವುದರೊಂದಿಗೆ ಕಲಾಪವು ಮಾರ್ಚ್ 4ಕ್ಕೆ ಮುಂದೂಡಲ್ಪಟ್ಟಿತು. ಫೆಬ್ರವರಿ 14ರಂದು ರಾಜ್ಯಪಾಲರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net