

ಬೆಂಗಳೂರು: ಕೆಜಿಎಫ್ 2 ಸಿನಿಮಾ ನಂತರ ನಿರ್ದೇಶಕ ಪ್ರಶಾಂತ್ ನೀಲ್ ನಟ ಪ್ರಭಾಸ್ಗೆ ಸಲಾರ್ ಸಿನಿಮಾ ನಿದೇರ್ಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು.
ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಮತ್ತೊಂದು ಅದ್ದೂರಿ ಸಿನಿಮಾ ಸಲಾರ್. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಇದೀಗ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜತೆಗೆ ಪೃಥ್ವಿರಾಜ್ ನಟಿಸುತ್ತಿರುವ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ. ಪೃಥ್ವಿರಾಜ್ ಸುಕುಮಾರನ್ ಜನ್ಮದಿನಕ್ಕೆ ಸಲಾರ್ ಟೀಮ್ ಫಸ್ಟ್ ಲುಕ್ ಗಿಫ್ಟ್ ನೀಡಿದ್ದು, ಪೃಥ್ವಿ ಅವತಾರ ಅಭಿಮಾನಿಗಳ ಕುತೂಹಲ ಹೆಚ್ಚು ಮಾಡಿದೆ.
ನಟ ಪೃಥ್ವಿರಾಜ್ ಹುಟ್ಟಹಬ್ಬದಂದು (ಅ.16) ಸಿನಿಮಾ ತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದಲ್ಲಿ ಪೃಥ್ವಿರಾಜ್ ಉಪಸ್ಥಿತಿಯನ್ನು ಅಧಿಕೃತಗೊಳಿಸಿದೆ. ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ರಗಡ್ ಲುಕ್ನಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ. ವರದರಾಜ್ ಮನ್ನಾರ್ ಎಂಬ ಪಾತ್ರದಲ್ಲಿ ಪೃಥ್ವಿರಾಜ್ ಅಬ್ಬರಿಸುತ್ತಿದ್ದಾರೆ. ಹೀಗಾಗಿ ಅವರ ಪಾತ್ರವೂ ಹೀಗೇ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ.
ಈಗಾಗಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಕಾಂತಾರ ಸಿನಿಮಾವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಸಲಾರ್ ಸಿನಿಮಾ ನಿರ್ಮಾಣವಾಗುತ್ತಿದೆ. ಕೆಜಿಎಫ್ ಸಿನಿಮಾ ತಂಡದಲ್ಲಿದ್ದ ಬಹುತೇಕ ತಂತ್ರಜ್ಞರು ಸಲಾರ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.