

ನವದೆಹಲಿ/ಜಮ್ಮು: ಮೂರು ದಶಕಗಳ ಕಾಲ ಕಾಶ್ಮೀರದ ಪ್ರತ್ಯೇಕತಾವಾದಿ ಚಳವಳಿಯ ಪ್ರತೀಕದಂತಿದ್ದ ಸೈಯದ್ ಅಲಿ ಷಾ ಗಿಲಾನಿ (90) ಕಾಶ್ಮೀರದ ಉಗ್ರಗಾಮಿ ಸಂಘಟನೆಗಳ ಅತ್ಯಂತ ದೊಡ್ಡ ಕೂಟವಾದ ಹುರಿಯತ್ ಕಾನ್ಪರೆನ್ಸ್ಗೆ ವಿದಾಯ ಹೇಳಿದ್ದಾರೆ.
1990ರಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಮುನ್ನಡೆಸಿದ್ದ ಗಿಲಾನಿ, ಹುರಿಯತ್ನ ಆಜೀವ ಅಧ್ಯಕ್ಷರಾಗಿದ್ದರು. ಸಂಘಟನೆಯಲ್ಲಿರುವ ಪ್ರಸಕ್ತ ಸನ್ನಿವೇಶಗಳಿಂದಾಗಿ ತಾವು ಅಖಿಲ ಭಾರತ ಹುರಿಯತ್ ಕಾನ್ಪರೆನ್ಸ್ಗೆ ರಾಜೀನಾಮೆ ನೀಡುತ್ತಿರುವುದಾಗಿ ಸೋಮವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಧ್ವನಿಮುದ್ರಿತ ಸಂದೇಶದಲ್ಲಿ ಗಿಲಾನಿ ಹೇಳಿದ್ದಾರೆ.
ವೇದಿಕೆಯಿಂದ ಸಂಪೂರ್ಣವಾಗಿ ದೂರ ಸರಿಯುತ್ತಿರುವುದಾಗಿಯೂ ಈ ಬಗ್ಗೆ ಅದರ ಎಲ್ಲ ಅಂಗ ಸಂಘಟನೆಗಳಿಗೆ ಪತ್ರ ಬರೆದಿರುವುದಾಗಿಯೂ ಅವರು ತಿಳಿಸಿದ್ದಾರೆ. 370ನೇ ವಿಧಿ ರದ್ದುಪಡಿಸಿದ ನಂತರ ಹುರಿಯತ್ ನಿಷ್ಕ್ರಿಯವಾಗಿದೆ ಎಂದು ಪತ್ರದಲ್ಲಿ ಗಿಲಾನಿ ಆರೋಪಿಸಿದ್ದಾರೆ.