

ಯೇಸುವಿನ ಆಪ್ತ ಹಾಗೂ ಅಕ್ಷರಸ್ಥ ಪ್ರೇಷಿತ ಶಿಷ್ಯನಾದ ಸಂತ ಮತ್ತಾಯ ಇಸ್ರೇಲ್ನ ಗಲಿಲೇ ಪ್ರಾಂತ್ಯದವನಾಗಿದ್ದು ರೋಮ್ ಆಡಳಿತದಡಿ ಸುಂಕ ವಸೂಲಿಗಾರನಾಗಿದ್ದ. ಯೇಸು ಕ್ರಿಸ್ತ ಬಾ ಎಂದು ಕರೆದಾಗ ತನ್ನ ಕೆಲಸ ಬಿಟ್ಟು ಆತನನ್ನು ಹಿಂಬಾಲಿಸಿದ. ಕ್ರಿಸ್ತನ ಅತ್ಯಂತ ನಿಕಟ ಒಡನಾಡಿಯಾಗಿದ್ದ ಮತ್ತಾಯ ಯೇಸುವಿನ ಸಕಲ ಅದ್ಭುತ ಕಾರ್ಯಗಳಿಗೂ ಸಾಕ್ಷಿಯಾಗಿದ್ದ. ಆತನ ಪ್ರಭೋಧನೆಗಳ ವೇಳೆಯಲ್ಲಿ, ಆತ ರೋಂ ಸೈನಿಕರ ಕೈಲಿ ಹಿಂಸೆ ಅನುಭವಿಸಿದ್ದು, ಶಿಲುಬೆ ಮೇಲೆ ಜಡಿದು, ಸಮಾಧಿ ಮಾಡಿ ಮತ್ತೆ ಪುನರುತ್ಥಾನನಾದದ್ದು ಇವೆಲ್ಲ ಘಟನೆಗಳನ್ನು ಮತ್ತಾಯ ಕಣ್ಣಾರೆ ನೋಡಿದ್ದ.
ಇಹಲೋಕದ ಜೀವನ್ಮುಕ್ತತೆ ಹಾಗೂ ಯೇಸು ಹೇಳುತ್ತಿದ್ದ ‘ನಾನೇ ಜೀವದಾಯಕ ರೊಟ್ಟಿ. ನನ್ನಲ್ಲಿಗೆ ಬರುವವನಿಗೆ ಹಸಿವೆ ಇರದು. ನನ್ನನ್ನು ವಿಶ್ವಾಸಿಸುವವನಿಗೆ ಎಂದಿಗೂ ದಾಹವಾಗದು’ ಎಂಬುದನ್ನು ಅಕ್ಷರಶಃ ವಿಶ್ವಾಸಿಸುತ್ತ ಯೇಸು ಕ್ರಿಸ್ತನಲ್ಲಿ ಸಂಪೂರ್ಣ ತಾದಾತ್ಮ್ಯ ಹೊಂದಿದ್ದ. ಯೇಸುವಿನ ಬೋಧನೆಗಳಾದ ಪ್ರೀತಿ ಮತ್ತು ಕ್ಷಮೆಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿ ಅವನ್ನೇ ತನ್ನ ಶುಭಸಂದೇಶದ ಹೊತ್ತಗೆಯಲ್ಲಿ ವೈಭವೀಕರಿಸಿದ.ತನ್ನ ಗುರು ಯೇಸು ಕ್ರಿಸ್ತನೊಂದಿಗಿನ ಆಪ್ತ ಒಡನಾಟದ ಕಾರಣ ಆತ ಬರೆದಿರುವ ಮತ್ತಾಯನ ಶುಭ ಸಂದೇಶ ಮಿಲಿಯಗಟ್ಟಲೆ ಕ್ರೖೆಸ್ತ ವಿಶ್ವಾಸಿಗಳನ್ನು ತಲುಪಿದ್ದು, ಇಂದಿಗೂ ಜಗತ್ತಿನ ಪ್ರತಿ ಕೆಥೋಲಿಕ್ ಕ್ರೖೆಸ್ತ ದೇವಾಲಯಗಳ ಪೂಜಾ ಪಾಠದ ವೇಳೆ ಅದರ ಭಾಗಗಳನ್ನು ಉಲ್ಲೇಖಿಸುತ್ತ ಪಠನ ಮಾಡಲಾಗುತ್ತಿದೆ.
ಯೇಸುವಿನ ಮರಣಾನಂತರ ಮತ್ತಾಯನು ಇಥಿಯೋಪಿಯ ಮತ್ತು ಪರ್ಷಿಯಾ ದೇಶಗಳಿಗೆ ತೆರಳಿ ಯೇಸುವಿನ ಶುಭ ಸಂದೇಶವನ್ನು ಪ್ರಸಾರ ಮಾಡುತ್ತ, ಅಲ್ಲೆಲ್ಲ ಕ್ರೖೆಸ್ತ ದೇವಾಲಯಗಳನ್ನು ನಿರ್ವಿುಸಿದ. ಜನರನ್ನು ಕ್ರೖೆಸ್ತಮತಕ್ಕೆ ಸೆಳೆಯುತ್ತಿರುವನೆಂಬ ಆಪಾದನೆಯ ಮೇಲೆ ಇಥಿಯೋಪಿಯಾದ ಮದಬಾರ್ ಎಂಬಲ್ಲಿ ಮತ್ತಾಯನನ್ನು ಎರಡು ಮೂರು ಅಲಗಿನ ಈಟಿಯಿಂದ ಇರಿದು ಕೊಲ್ಲಲಾಯಿತು. ಹೀಗೆ ಕ್ರಿಸ್ತನ ಶುಭಸಂದೇಶ ಬರೆದು ಪಸರಿಸಿದ ಪ್ರೇಷಿತ ಶಿಷ್ಯ ಮತ್ತಾಯ ತನ್ನ ಗುರುವಿಗಾಗಿ ಹುತಾತ್ಮನಾದ.