ಪ್ರೇಷಿತ ಸಂತ ಬಾರ್ತಲೋಮಿಯೊ

ವಿಜಯವಾಣಿ (7)
Published on

‘ನಾನೇ ಜೀವ! ನಾನೇ ಸತ್ಯ! ನಾನೇ ಮಾರ್ಗ!’ ಎಂಬ ಯೇಸುವಿನ ನೇರವಾದ ದಾರಿಯನ್ನು ಹುಡುಕಿ ಶುಭ ಸಂದೇಶ ಸಾರಲು ಹೊರಟ ಬಾರ್ತಲೋಮಿಯೊ ಎಂಬ ಪ್ರೇಷಿತ ಶಿಷ್ಯ ಸಂತ ಯೊವಾನ್ನನ ಶುಭ ಸಂದೇಶದಲ್ಲಿ ನಥಾನಿಯೇಲ್ ಎಂದೂ ನಮೂದಿತನಾಗಿದ್ದಾನೆ. ಇಸ್ರೇಲಿನ ಗಲಿಲೇಯ ಪ್ರಾಂತ್ಯದ ಕಾನಾ ಎಂಬ ಊರಿನಲ್ಲಿ ಜನಿಸಿದ ಈತ ತನ್ನ ಗುರುವಿನ ಬದುಕಿನ ಅನೇಕ ಪ್ರಮುಖ ಸಂದರ್ಭಗಳಿಗೆ ಸಾಕ್ಷಿಯಾಗಿದ್ದ. ಯೇಸುವಿನ ಮರಣಾನಂತರ ಈತ ಮೆಸಪೊಟೋಮಿಯ (ಇಂದಿನ ಇರಾನ್) ಮತ್ತು ಪಕ್ಕದ ಅಂದಿನ ಪಾರ್ಥಿಯ ಪ್ರಾಂತ್ಯಗಳಲ್ಲಿ ಹಾಗೂ ಲಿಚೋನಿಯೊ ಮತ್ತು ಎಥಿಯೋಪಿಯಾ ದೇಶಗಳಲ್ಲೂ ಕ್ರೖೆಸ್ತ ಧರ್ಮ ಪ್ರಚಾರ ಕೈಗೊಂಡ.

ಬಾರ್ತಲೋಮಿಯನದು ಎದ್ದು ಕಾಣುವ ಎತ್ತರದ ಸಪೂರ ಮೈಕಟ್ಟಿನ ದೃಢ ದೇಹ. ಎಲ್ಲರನ್ನೂ ಆಕರ್ಷಿಸುವ ಪೋಷಾಕು ಧರಿಸುತ್ತಿದ್ದ ಈತ ನಯ ನಾಜೂಕುಗಳಲ್ಲಿ ಎತ್ತಿದ ಕೈ. ತದ್ದೇಯುಸ್​ನ ಯೂದನಂತೆ ಈತನೂ ಮೊದಲ ಶತಮಾನದ ಅವಧಿಯಲ್ಲಿಯೇ ಆಮೇನಿಯ ಪ್ರಾಂತ್ಯದಲ್ಲೂ ಕ್ರೖೆಸ್ತಧರ್ಮದ ಮಿಷನರಿ (ಧರ್ಮ ಪ್ರಚಾರಕ)ಯ ಕರ್ತವ್ಯ ನಿರ್ವಹಿಸಿದ. ಆದುದರಿಂದ ಈ ಇಬ್ಬರೂ ಪ್ರೇಷಿತ ಸಂತರನ್ನು ಆರ್ವೆನಿಯಾದ ಕ್ರೖೆಸ್ತ ಧರ್ಮಸಭೆ ತನ್ನ ಪಾಲಕ ಸಂತರು (ಪೇಟ್ರನ್ ಸೇಂಟ್ಸ್) ಎಂದು ಗೌರವಿಸುತ್ತಿದೆ.

ಹೀಗೆ, ಕ್ರಿಸ್ತನ ಶುಭಸಂದೇಶ ಪ್ರಚಾರವನ್ನೇ ತನ್ನ ಬದುಕಿನ ಗುರಿಯನ್ನಾಗಿಸಿಕೊಂಡ ಬಾರ್ತಲೋಮಿಯೊ ಮೇಲಿನ ಪ್ರಾಂತ್ಯಗಳಲ್ಲದೆ (ಹಿಂದಿನ ಸೋವಿಯತ್ ಒಕ್ಕೂಟದ) ಅಝುರ್ ಬೈಜಾನ್ ದೇಶಕ್ಕೂ ತೆರಳಿದ್ದು, ಅಲ್ಲಿಯ ಜನಸಮೂಹ ತಮ್ಮಲ್ಲಿಗೆ ಕ್ರೖೆಸ್ತ ಧರ್ಮವನ್ನು ಕರೆತಂದವರು ಎಂದೇ ಈತನನ್ನು ಗೌರವಿಸುತ್ತಾರೆ. ಆತನ ನೆನಪಿಗಾಗಿ ಅಲ್ಲೊಂದು ಭವ್ಯ ದೇವಾಲಯವನ್ನೂ ನಿರ್ವಿುಸಿದ್ದಾರೆ. ಹೀಗೆ, ತನ್ನ ಗುರು ಕ್ರಿಸ್ತನಿಗಾಗಿ ಬದುಕನ್ನು ಸವೆಸಿದ ಬಾರ್ತಲೋಮಿಯೋರನ್ನು ಕ್ರಿಸ್ತ ಶಕ ಎಪ್ಪತ್ತೊಂದರಲ್ಲಿ ಅಲ್ಲಿಯ ವಿಗ್ರಹಾರಾಧಕ ಪಾಷಂಡಿಗಳು ಚಿತ್ರಹಿಂಸೆ ನೀಡಿ ಹತ್ಯೆಗೈದರು. ಹೀಗೆ ಬಾರ್ತಲೋಮಿಯೋ ಕ್ರೖೆಸ್ತ ಧರ್ಮಸಭೆಯ ಪ್ರೇಷಿತ ಹುತಾತ್ಮನಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net