ಅನಂತ್​-ರಾಧಿಕಾ ಪ್ರೀ ವೆಡ್ಡಿಂಗ್​: ವಿಐಪಿಗಳು ಉಳಿದುಕೊಂಡಿರುವ ಲಕ್ಷುರಿ ಟೆಂಟ್​ ಹೇಗಿದೆ ನೋಡಿ! ವಿಡಿಯೋ ವೈರಲ್​

Anant Ambani (2)
Published on

ಜಾಮ್​ನಗರ: ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆ ಜುಲೈ 12ರಂದು ಅದ್ಧೂರಿಯಾಗಿ ನಡೆಯಲಿದೆ. ಮಾರ್ಚ್​ 1 ರಿಂದ 3 ದಿನಗಳ ಕಾಲ ಗುಜರಾತಿನ ಜಾಮ್​ನಗರದಲ್ಲಿ ಪ್ರೀ ವೆಡ್ಡಿಂಗ್​ ಸಂಭ್ರಮ ಮನೆ ಮಾಡಿದೆ. ಸಿನಿಮಾ, ರಾಜಕೀಯ ಹಾಗೂ ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದ ಗಣ್ಯರು ಆಗಮಿಸುವ ಮೂಲಕ ಪ್ರೀ ವೆಡ್ಡಿಂಗ್​ ಸಮಾರಂಭಕ್ಕೆ ಮತ್ತಷ್ಟು ರಂಗು ತುಂಬಿದ್ದಾರೆ.

ಪ್ರೀ ವೆಡ್ಡಿಂಗ್​ಗೆ ಆಗಮಿಸಿರುವ ಪ್ರತಿಯೊಬ್ಬ ಅತಿಥಿಗಳಿಗೂ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಒಬ್ಬೇ ಒಬ್ಬ ಅತಿಥಿಗೂ ಯಾವುದೇ ಕೊರತೆ ಮಾಡಿಲ್ಲ. ಅತ್ಯುತ್ತಮ ಸೌಲಭ್ಯಗಳನ್ನು ನೀಡಲಾಗಿದೆ. ಮೂಲಗಳ ಪ್ರಕಾರ ಮದುವೆಗೆ 1000 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಪ್ರೀ ವೆಡ್ಡಿಂಗ್​ಗೆ ಆಹ್ವಾನಿಸಲಾದ ಹೆಸರಾಂತ ಕ್ರೀಡಾಪಟುಗಳಲ್ಲಿ ಭಾರತೀಯ ಟೆನಿಸ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಒಬ್ಬರು. ಜಾಮ್​ನಗರಕ್ಕೆ ಆಗಮಿಸಿರುವ ಅತಿಥಿಗಳಿಗೆ ಉಳಿದುಕೊಳ್ಳಲು ಅಂಬಾನಿ ಕುಟುಂಬ ಮಾಡಿರುವ ಐಷಾರಾಮಿ ಸೌಲಭ್ಯಕ್ಕೆ ಸೈನಾ ನೆಹ್ವಾಲ್‌ ಫಿದಾ ಆಗಿದ್ದು, ಅವರು ವಿಡಿಯೋ ಮಾಡಿ ಶೇರ್​ ಮಾಡಿಕೊಂಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಐಪಿ ಅತಿಥಿಗಳಿಗಾಗಿ ಜಾಮ್‌ನಗರದಲ್ಲಿ ಅತ್ಯುತ್ತಮ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಟೆಂಟ್​ ಒಳಗೆ ಐಷಾರಾಮಿ ಸೋಫಾ, ಬೆಡ್, ಬೀರುಗಳು, ಡ್ರೆಸ್ಸಿಂಗ್ ಟೇಬಲ್ ಮತ್ತು ಐಷಾರಾಮಿ ರೆಸ್ಟ್‌ರೂಮ್ ಜೊತೆಗೆ ಅಸಾಧಾರಣ ವಿದ್ಯುತ್​ ಸೌಲಭ್ಯವನ್ನು ನೀಡಲಾಗಿದೆ.

ಜಾಮ್​ನಗರ ಆಯ್ಕೆ ಏಕೆ? ವಿವಾಹಪೂರ್ವ ಸಮಾರಂಭಕ್ಕೆ ಜಾಮ್​ನಗರ ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣ ವನ್ನು ಮುಕೇಶ್ ಪತ್ನಿ ನೀತಾ ಅಂಬಾನಿ ವಿವರಿಸಿದ್ದಾರೆ. ‘ನನ್ನ ಮಕ್ಕಳು ಬಾಲ್ಯವನ್ನು ಜಾಮ್​ನಗರದಲ್ಲಿ ಕಳೆದಿದ್ದಾರೆ, ಇಲ್ಲಿ ಬಾಲ್ಯದ ವಿಶಿಷ್ಟ ಅನುಭವವನ್ನು, ಪರಿಸರದೊಂದಿಗಿನ ಸಾಂಗತ್ಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಬೇರುಗಳು ಮರೆಯಬಾರದು ಎಂಬ ಉದ್ದೇಶದಿಂದ ಮತ್ತು ಹಳೆಯ ಕ್ಷಣಗಳನ್ನು ನೆನಪಿಸಿ, ಆಹ್ಲಾದಿಸುವ ದೃಷ್ಟಿಯಿಂದ ವಿವಾಹ ಪೂರ್ವ ಸಮಾರಂಭಕ್ಕೆ ಜಾಮ್​ನಗರ ಆಯ್ಕೆ ಮಾಡಲಾಯಿತು’ ಎಂದಿದ್ದಾರೆ. ತಂದೆ ಧೀರೂಬಾಯಿ ಅಂಬಾನಿ ಅವರಿಂದ ಉದ್ಯಮದ ಜವಾಬ್ದಾರಿಯನ್ನು ಸ್ವೀಕರಿಸಿ, ಮುಕೇಶ್ ಕಾರ್ಯಾರಂಭ ಮಾಡಿದ್ದು ಕೂಡ ಜಾಮ್​ ನಗರದಿಂದಲೇ.

ಮುಂಬೈನಲ್ಲಿ ಮದುವೆ : ಇದೇ ವರ್ಷದ ಜುಲೈ 12ರಂದು ಮುಂಬೈಯಲ್ಲಿ ಮದುವೆ ನಡೆಯಲಿದ್ದು, ನಿಶ್ಚಿತಾರ್ಥ 2022ರಲ್ಲಿ ರಾಜಸ್ಥಾನದ ಶ್ರೀನಾಥಜೀ ಮಂದಿರದಲ್ಲಿ ನಡೆದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net