

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸುವ ಉದ್ದೇಶದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ಮುತ್ತಿಗೆ ಯತ್ನ ವಿಫಲಗೊಳಿಸಿದರು.
ಬಿಜೆಪಿ ಎಸ್ಟಿ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸಮುದಾಯದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನದ ಕಟ್ಟೆಯಿಂದಾಚೆ ಹೋಗದಂತೆ ಖಾಕಿ ಭದ್ರ ಕೋಟೆ ನಿರ್ವಿುಸಿತ್ತು. ಕೊನೆಗೂ ಕೇಸರಿಪಡೆ ಕೇಕೆ ಹಾಕಿ ಮುಂದಡಿ ಇಡುತ್ತಿದ್ದಂತೆ ಪೊಲೀಸರು ತಡೆದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ, ದಲಿತ ವಿರೋಧಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ ಎಂದು ವಾಗ್ದಾಳಿ ಮಾಡಿದರು. ಸರ್ಕಾರದ ಬೆದರಿಕೆಗೆ ಬಗ್ಗುವುದಿಲ್ಲ, ಪೊಲೀಸರು ನಿರ್ಬಂಧ ಹೇರಿದರೂ ವಿಧಾನಸೌಧಕ್ಕೆ ನುಗ್ಗುತ್ತೇವೆ ಎಂದು ಗುಡುಗಿದರು.
ದಲಿತರ ಹಣವನ್ನು ಸರ್ಕಾರ ಲೂಟಿ ಮಾಡಿದೆ. ಬಡವರ ಪಾಲಿನ ಮುಡಾ ನಿವೇಶನಗಳು ಸಿಎಂ ಪತ್ನಿಗೆ ಹಂಚಿಕೆಯಾಗಿವೆ. ಸಿಎಂ ಸಿದ್ದರಾಮಯ್ಯ, ಸಚಿವರ ಬಂಡವಾಳ ಹೊರ ಬಿದ್ದಿದೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಒತ್ತಾಯಿಸಿದರು.
ಪೊಲೀಸರ ಸರ್ಪಗಾವಲು: ವಿಜಯೇಂದ್ರ ಸೇರಿ ಎಲ್ಲ ನಾಯಕರು ಭಾಷಣ ಮುಗಿಸಿ, ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಪೊಲೀಸರು ಸುತ್ತುವರಿದು, ಮುಂದಕ್ಕೆ ಹೋಗಲು ಬಿಡದೆ ಸುಪರ್ದಿಗೆ ಪಡೆದು ಪೊಲೀಸ್ ವಾಹನಗಳಲ್ಲಿ ಕರೆದೊಯ್ದರು.
ಈ ವೇಳೆ ಮಾಜಿ ಸಚಿವ ಬಿ.ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಫೋಟೊಗಳು, ಘೊಷಣೆಗಳ ಫಲಕ ಪ್ರದರ್ಶಿಸಿದ ಕಾರ್ಯಕರ್ತರು, ದಲಿತ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗಿದರು. ಪೊಲೀಸರು ಬಲವಂತವಾಗಿ ವಶಕ್ಕೆ ಪಡೆಯುವಾಗ ನೂಕಾಟ, ತಳ್ಳಾಟವಾಯಿತು.
ರಸ್ತೆಯಲ್ಲೇ ಪ್ರತಿಭಟನೆ: ಕಾರ್ಯಕರ್ತರು ಬಸ್ ಟಾಪ್ ಹತ್ತಿ ಕುಳಿತರೆ, ಅವರನ್ನು ಕೆಳಗಿಳಿಸಲು ಪೊಲೀಸರು ಹರಸಾಹಸಪಟ್ಟರು. ಕಾರ್ಯಕರ್ತರನ್ನು ನಿಯಂತ್ರಿಸಲು ಬ್ಯಾರಿಕೇಡ್, ಹೆಚ್ಚಿನ ಪೊಲೀಸ್ ಬಲವಿದ್ದರೂ ಖಾಕಿ ಪಡೆ ಬೆವರು ಹರಿಸಿತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಡಿ ಎಂದು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರೆ, ಅತ್ತ ಸಂಚಾರ ದಟ್ಟಣೆ ಹೆಚ್ಚಿತು. ಪೊಲೀಸರು ತಾಳ್ಮೆಯಿಂದಲೇ ಮನವೊಲಿಸಿದರು. ರಸ್ತೆಯಲ್ಲಿ ಕುಳಿತವರನ್ನು ಬಲವಂತವಾಗಿ ಕರೆದೊಯ್ದರು. ಪ್ರತಿಭಟನಾ ಸಭೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ರಾಜೂಗೌಡ, ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿದರು. ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಪೊಲೀಸರ ವಶಕ್ಕೆ : ವಿಧಾನಸೌಧ ಮುತ್ತಿಗೆ ಅವಕಾಶ ಕ್ಷೀಣಿಸುತ್ತಿದ್ದಂತೆ ಬಿಜೆಪಿಯ ಕೆಲ ಮುಖಂಡರು ಶಾಸಕರ ಭವನದತ್ತ ಧಾವಿಸಿದರು. ಭವನಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಸುಳಿವು ಅರಿತ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.
ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ ಪರಿಶಿಷ್ಟ ಜಾತಿ, ಪಂಗಡದವರು ನಮ್ಮವರೇ ಸಿಎಂ ಎಂದು ಖುಷಿಪಟ್ಟರು. ಆದರೆ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ಬಂಡವಾಳ ಬಯಲಾಗಿದೆ. ದಲಿತರ ಹಣ ಲೂಟಿ ಮಾಡಿದ ಸರ್ಕಾರವನ್ನು ಮನೆಗೆ ಕಳುಹಿಸುವ ತನಕ ಹೋರಾಟ ನಿಲ್ಲುವುದಿಲ್ಲ. | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸಿರುವುದು ಕಾಂಗ್ರೆಸ್ನವರಿಗೆ ನಾಚಿಕೆಯಾಗಬೇಕು. ಹಿಂದಿನಿಂದಲೂ ದಲಿತರ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಸಿಎಂ ರಾಜೀನಾಮೆ ಕೊಡುವ ತನಕ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರು ನಿರಂತರ ಹೋರಾಟ ಮಾಡಿ, ಕಾಂಗ್ರೆಸ್ನವರ ಮೋಸದಾಟ ಬಯಲು ಮಾಡಬೇಕು. | ಗೋವಿಂದ ಕಾರಜೋಳ ಸಂಸದ