

ಮಾಹಿತಿ-ತಂತ್ರಜ್ಞಾನದ ವ್ಯಾಪ್ತಿ ಅಗಾಧವಾಗಿ ಬೆಳೆದಿದೆ, ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ ಎಂಬುದು ನಿಜವೇ. ಆದರೆ, ಸುಧಾರಣೆಯ ಅಸ್ತ್ರವಾಗಬೇಕಿದ್ದ ಇದು ವಿಧ್ವಂಸಕ, ಸಮಾಜವಿರೋಧಿ ಶಕ್ತಿಗಳ ಕೈಗೆ ಸಿಕ್ಕು, ದುರುಪಯೋಗವಾಗುತ್ತಿದೆ. ಅಷ್ಟೇ ಅಲ್ಲ, ಅಪರಾಧದ ಹೊಸ, ಕರಾಳ ಮುಖಗಳು ಬೆಳಕಿಗೆ ಬರುತ್ತಿರುವುದು ಆತಂಕಕಾರಿ ವಿದ್ಯಮಾನ. ಮೈಕ್ರೋಸಾಫ್ಟ್ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ಇತ್ತೀಚೆಗೆ ನಡೆದ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಕಳವಳವನ್ನು ಹಂಚಿಕೊಂಡಿದ್ದಾರಲ್ಲದೆ, ‘ಕೃತಕ ಬುದ್ಧಿಮತ್ತೆ (ಎಐ) ಹಾಗೂ ಇತರ ಪ್ರಬಲ ತಂತ್ರಜ್ಞಾನವು ಅಕುಶಲ ಹಾಗೂ ತರಬೇತಾಗದ ಕೈಗಳಲ್ಲಿ ದುರ್ಬಳಕೆ ಆಗುವ ಭಾರಿ ಅಪಾಯವಿದೆ. ಎಐ-ಸೃಷ್ಟಿತ ಕಂಟೆಂಟ್ಗಳ ಮೇಲೆ ವಾಟರ್ವಾರ್ಕ್ ಬಳಸುವುದು ಒಳ್ಳೆಯದು. ತಪು್ಪ ಮಾಹಿತಿ ಹಾಗೂ ಡೀಪ್ಫೇಕ್ಗೆ ಸಂಬಂಧಿತ ಹಾನಿಗಳನ್ನು ತಡೆಯಲು ಇದು ಅಗತ್ಯ’ ಎಂದು ಪ್ರತಿಪಾದಿಸಿರುವುದು ಗಮನಾರ್ಹ. ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಸಮರ್ಥ ಮಾಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಇದು ಸರ್ಕಾರ, ತಂತ್ರಜ್ಞರು ಹಾಗೂ ಕ್ಷೇತ್ರತಜ್ಞರ ಜವಾಬ್ದಾರಿಯೂ ಹೌದು.
ಇತ್ತೀಚಿನ ದಿನಗಳಲ್ಲಿ, ಸೈಬರ್ ವಂಚಕರು ಅಡ್ವಾನ್ಸ್ಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನ ದುರ್ಬಳಕೆಯ ಮೂಲಕ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕುಟುಂಬಸ್ಥರು, ಸ್ನೇಹಿತರ ವಾಯ್್ಸ ಕ್ಲೋನಿಂಗ್ ಮಾಡಿ ವೈಯಕ್ತಿಕ ಮಾಹಿತಿಗಳನ್ನು ಪಡೆಯುವ ಮೂಲಕ ವಂಚಿಸುತ್ತಿದ್ದಾರೆ. ಡೀಪ್ಫೇಕ್ ವಿಡಿಯೋ ಸೃಷ್ಟಿಸಿ ಜನರನ್ನು ಬೆದರಿಸುತ್ತಿರುವ ಪ್ರಕರಣಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಭಾರತದಲ್ಲಿ ಶೇಕಡ 83ರಷ್ಟು ಜನರು ಸೈಬರ್ ವಂಚಕರ ಎಐ ವಾಯ್್ಸ ಕ್ಲೋನಿಂಗ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವುದು ಖಾಸಗಿ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ದೃಢಪಟ್ಟಿದೆ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐಸಿಸಿಸಿಸಿ) ಮಾಹಿತಿ ಅನ್ವಯ 2021ರ ಏಪ್ರಿಲ್ 1ರಿಂದ ಈವರೆಗೆ ದೇಶದಲ್ಲಿ 10,300 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿರುವುದು ಈ ಅಪರಾಧಗಳ ಕರಾಳತೆಗೆ ಸಾಕ್ಷಿಯಾಗಿದೆ. ಇಂಥ ಸಂದರ್ಭಗಳಲ್ಲಿ ಜನರು ಕೂಡ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.
ಇಂಥ ವಂಚನೆಗಳು ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿ ಉಳಿದಿಲ್ಲ. ಬ್ಯಾಂಕ್ ಸರ್ವರ್ ಅಥವಾ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಮಾಹಿತಿ ಕದಿಯುವ, ಸರ್ಕಾರಿ ಸಂಸ್ಥೆ, ವಿಭಾಗಗಳ ಮಾಹಿತಿಗೂ ಕನ್ನ ಹಾಕುವ ಘಟನೆಗಳು ನಡೆಯುತ್ತಿವೆ. ವಂಚನೆಯ ಪ್ರಕರಣಗಳು ಇದೇ ರೀತಿ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ, ಪರಿಹಾರದ ಮಾಗೋಪಾಯಗಳ ಬಗ್ಗೆ ಚಿಂತನೆ ನಡೆಯಬೇಕಿದೆ. ತಂತ್ರಜ್ಞಾನದ ಮೂಲಕವೇ ಇಂಥ ಮೋಸಕೃತ್ಯಗಳನ್ನು ತಡೆಯುವ, ಸೈಬರ್ ಅಪರಾಧಗಳನ್ನು ಹಣಿಯುವ ಉಪಾಯಗಳು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದು ಕೂಡ ಮುಖ್ಯ